ತಳವಾರ ಸಮುದಾಯಕ್ಕೆ ಶಾಶ್ವತ ನ್ಯಾಯ ಒದಗಿಸಿ: ಸಿಎಂಗೆ ತಳವಾರ ಮಹಾಸಭಾ ಮನವಿ

ಕಲಬುರಗಿ: ಸಂವಿಧಾನಾತ್ಮಕವಾಗಿ ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಗೆ ಸೇರ್ಪಡೆಯಾಗಿರುವ ತಳವಾರ ಸಮುದಾಯಕ್ಕೆ ಕಳೆದ ಎರಡು ವರ್ಷಗಳಿಂದ ಹಕ್ಕುಗಳ ಸಂಪೂರ್ಣ ಅನುಷ್ಠಾನವಾಗದೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ತಳವಾರ ಮಹಾಸಭಾ ಆರೋಪಿಸಿದೆ.
ವಿಶೇಷವಾಗಿ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಎಸ್‌ಟಿ ಪ್ರಮಾಣಪತ್ರ ವಿತರಣೆ ಸೇರಿದಂತೆ ಆಡಳಿತಾತ್ಮಕ ಗೊಂದಲಗಳಿಂದ ಬಡ ತಳವಾರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು ಮಹಾಸಭಾ ಅಧ್ಯಕ್ಷ ಚಂದ್ರಕಾಂತ ದಶರಥ ತಳವಾರ ತಿಳಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿರುವ ಅವರು, ತಳವಾರ ಸಮುದಾಯಕ್ಕೆ ಸಂವಿಧಾನಬದ್ಧ ಎಸ್‌ಟಿ ಹಕ್ಕುಗಳನ್ನು ಯಾವುದೇ ಗೊಂದಲವಿಲ್ಲದೆ ಸಂಪೂರ್ಣವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳ ಗಮನಕ್ಕೂ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣ, ಉದ್ಯೋಗಾವಕಾಶ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳ ಮೇಲೂ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದ್ದಾರೆ.
ಎಸ್‌ಟಿ ಪ್ರಮಾಣಪತ್ರ ವಿತರಣೆ ಕುರಿತು ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿ, ಸ್ಪಷ್ಟ ಹಾಗೂ ಏಕರೂಪದ ಮಾರ್ಗಸೂಚಿ ಅಥವಾ ಸರ್ಕಾರದ ಆದೇಶ ಹೊರಡಿಸಬೇಕು. ಅರ್ಹ ತಳವಾರ ಕುಟುಂಬಗಳಿಗೆ ಪ್ರಮಾಣಪತ್ರ ದೊರೆಯುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ತಳವಾರ ಸಮುದಾಯಕ್ಕೆ ಹೊಸ ಮೀಸಲಾತಿ ಅಥವಾ ಹೆಚ್ಚುವರಿ ಸೌಲಭ್ಯ ನೀಡುವಂತೆ ಬೇಡಿಕೆ ಇಟ್ಟಿಲ್ಲ. ಈಗಾಗಲೇ ಸಂವಿಧಾನ ಮತ್ತು ಕಾನೂನುಬದ್ಧವಾಗಿ ದೊರೆತಿರುವ ಎಸ್‌ಟಿ ಹಕ್ಕುಗಳ ಅನುಷ್ಠಾನವನ್ನಷ್ಟೇ ಕೇಳಲಾಗುತ್ತಿದೆ. ಈ ಹಕ್ಕುಗಳು ಕಡತಗಳಲ್ಲೇ ಉಳಿಯದೆ ಪ್ರತಿಯೊಬ್ಬ ಅರ್ಹ ತಳವಾರ ಕುಟುಂಬದ ಕೈಗೆ ತಲುಪುವಂತೆ ಸರ್ಕಾರ ತುರ್ತು ಕ್ರಮ ಕೈಗೊಂಡು ಶಾಶ್ವತ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.



