ಸೇವೆಯ ಮೂಲಕ ಶಾಶ್ವತ ಪರಿಣಾಮ ಸೃಷ್ಟಿಸುವುದು ರೋಟರಿಯ ಧ್ಯೇಯ: ಗಣ್ಯರು

ಕಲಬುರಗಿ: ರೋಟರಿ ಕ್ಲಬ್ ಆಫ್ ಕಲಬುರಗಿ ಸನ್ಸಿಟಿ ಹಾಗೂ ಇನ್ನರ್ವೀಲ್ ಕ್ಲಬ್ ಆಫ್ ಕಲಬುರಗಿ ಸನ್ಸಿಟಿಯ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಗರದ ಸಾರ್ವಜನಿಕ ಉದ್ಯಾನವನ ರಸ್ತೆಯ ರೋಟರಿ ಶಾಲಾ ಆವರಣದಲ್ಲಿರುವ ಪಾಲ್ ಹ್ಯಾರಿಸ್ ಸಭಾಂಗಣದಲ್ಲಿ ನಡೆಯಿತು.
ರೋಟರಿ ಕ್ಲಬ್ನ 2026-27ನೇ ಸಾಲಿನ ಅಧ್ಯಕ್ಷರಾಗಿ ಆಲೂರಿ ವೆಂಕಟ್, ಕಾರ್ಯದರ್ಶಿಯಾಗಿ ಅನೂಪ್ ಜವಳ್ಕರ್ ಹಾಗೂ ಅವರ ತಂಡದ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು. ಉಪಾಧ್ಯಕ್ಷರಾಗಿ ಅಭಿಜೀತ್ ಚಿಂಡೆ, ಜಂಟಿ ಕಾರ್ಯದರ್ಶಿಯಾಗಿ ಕೇದಾರ್ ಕಮಲಾಪುರ್ಕರ್, ಸರ್ಜೆಂಟ್-ಅಟ್-ಆರ್ಮ್ಸ್ ಆಗಿ ಶ್ರೀಕಾಂತ್ ಮೆಂಗಿ, ಕ್ಲಬ್ ಸಲಹೆಗಾರರಾಗಿ ಪಿಎಚ್ಎಫ್ಸಿಎ ಮಲ್ಲಿಕಾರ್ಜುನ ಮಹಾಂತಗೋಳ ಹಾಗೂ ಕ್ಲಬ್ ತರಬೇತುದಾರರಾಗಿ ಶಶಾಂಕ್ ಬಲ್ದವಾ ಸೇರಿದಂತೆ ವಿವಿಧ ಸೇವಾ ವಿಭಾಗಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು.
ಇನ್ನರ್ವೀಲ್ ಕ್ಲಬ್ ಆಫ್ ಕಲಬುರಗಿ ಸನ್ಸಿಟಿಯ 2026-27ನೇ ಸಾಲಿನ ಅಧ್ಯಕ್ಷರಾಗಿ ಸಾರಿಕಾ ರಂಗದಲ, ಕಾರ್ಯದರ್ಶಿಯಾಗಿ ಮನೀಷಾ ಜೈನ್ ಹಾಗೂ ಅವರ ತಂಡ ಪದಗ್ರಹಣ ಮಾಡಿತು. ಜಂಟಿ ಕಾರ್ಯದರ್ಶಿಯಾಗಿ ಅಂಜನಾ ಶಿವಾಳ, ಕೋಶಾಧಿಕಾರಿಯಾಗಿ ವಿಜಯಶ್ರೀ ಮುಕ್ಕ, ಐಎಸ್ಒ ಆಗಿ ಪ್ರಿಯಾ ವೀರೇಶ್ ಹಾಗೂ ಸಂಪಾದಕರಾಗಿ ದೀಪಾ ಯಡಕೆ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಅಧಿಕಾರ ಸ್ವೀಕರಿಸಿದರು.
ರೋಟರಿ ಜಿಲ್ಲಾ ಮಾಜಿ ಗವರ್ನರ್ ಆರ್ಟಿಎನ್. ಪಿಎಚ್ಎಫ್. ಮಣಿಲಾಲ್ ಪಿ. ಶಾ ಹಾಗೂ ಇನ್ನರ್ವೀಲ್ ಜಿಲ್ಲಾ ಐಎಸ್ಒ ಡಾ. ಜ್ಯೋತಿ ತೆಗನೂರ್ ಅವರು ಪದಗ್ರಹಣ ಅಧಿಕಾರಿಗಳಾಗಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಜಿಲ್ಲಾ ಮಾಜಿ ಜಿಲ್ಲಾ ಗವರ್ನರ್ ಡಾ. ಗೌತಮ್ ಜಹಾಗೀರ್ದಾರ್, ಮಾಜಿ ಜಿಲ್ಲಾ ಗವರ್ನರ್ ಮಾಣಿಕ್ ಪವಾರ್, ಸಹಾಯಕ ಗವರ್ನರ್ ಡಾ. ಸುಧಾ ಹಲೈಕಿ, ಮಾಜಿ ಸಹಾಯಕ ಗವರ್ನರ್ ವಿನಯಕುಮಾರ್ ಶಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಾತನಾಡಿದ ಗಣ್ಯರು, ರೋಟರಿ ಹಾಗೂ ಇನ್ನರ್ವೀಲ್ ಸಂಸ್ಥೆಗಳು ಸಮಾಜಮುಖಿ ಸೇವಾ ಚಟುವಟಿಕೆಗಳ ಮೂಲಕ ಶಿಕ್ಷಣ, ಆರೋಗ್ಯ, ಸಾಕ್ಷರತೆ, ಯುವಜನತೆ ಹಾಗೂ ಅಗತ್ಯವಿರುವವರಿಗೆ ನೆರವು ನೀಡುವ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸಬೇಕು ಎಂದು ಕರೆ ನೀಡಿದರು.
“ಸೇವೆಯ ಮೂಲಕ ಶಾಶ್ವತ ಪರಿಣಾಮವನ್ನು ಸೃಷ್ಟಿಸುವುದು ರೋಟರಿಯ ಧ್ಯೇಯ. ನೂತನ ತಂಡ ಈ ಆಶಯವನ್ನು ಮತ್ತಷ್ಟು ಬಲಪಡಿಸಲಿ” ಎಂದು ಅವರು ಶುಭ ಹಾರೈಸಿದರು.
ರೋಟರಿ ಕ್ಲಬ್ನ ಹಿಂದಿನ ಅಧ್ಯಕ್ಷ ಡಾ. ಕವಿರಾಜ್ ಮೋಟಕಪಲ್ಲಿ ಹಾಗೂ ಇನ್ನರ್ವೀಲ್ನ ಹಿಂದಿನ ಅಧ್ಯಕ್ಷೆ ಸ್ವಾತಿ ಪವಾರ್ ಅವರು ನೂತನ ತಂಡಕ್ಕೆ ಶುಭಕೋರಿದರು. ರೋಟರಿ ಮತ್ತು ಇನ್ನರ್ವೀಲ್ ಸದಸ್ಯರು ಹಾಗೂ ರೋಟರಿ ಸಹಾಯಕ ಮಲ್ಲಿಕಾರ್ಜುನ ಬಿರಾದಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



