ಕಲಬುರಗಿ

ಹಡಪದ ಅಪ್ಪಣ್ಣ ಸಮಾಜಕ್ಕೆ ಮೀಸಲಾತಿಗಾಗಿ ಸಂಘಟಿತರಾಗಿ ಹೋರಾಡಿ

ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡಿ: ಈರಣ್ಣ ಸಿ. ಹಡಪದ ಸಣ್ಣೂರ

ಕಲಬುರಗಿ, ಸೆ. 15: ಹಡಪದ ಅಪ್ಪಣ್ಣ ಸಮಾಜಕ್ಕೆ ಮೀಸಲಾತಿ ದೊರಕಿಸಿಕೊಳ್ಳಲು ಸಮಾಜದ ಪ್ರತಿಯೊಬ್ಬರೂ ಸಂಘಟನೆಯೊಂದಿಗೆ ಕೈಜೋಡಿಸಿ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಹಡಪದ ಅಪ್ಪಣ್ಣ ಸಮಾಜದ ಕಲಬುರಗಿ ಜಿಲ್ಲಾಧ್ಯಕ್ಷ ಈರಣ್ಣ ಸಿ. ಹಡಪದ ಸಣ್ಣೂರ ಕರೆ ನೀಡಿದರು.

ನಗರದ ಶಿವಶಕ್ತಿ ನಗರದಲ್ಲಿರುವ ಶರಣ ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ನಡೆದ ಶ್ರಾವಣ ಮಾಸದ ಮುಕ್ತಾಯ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿ ಜಾರಿಗೆ ಬಂದಿರುವುದು ಸಮಾಜದ ಸಂಘಟಿತ ಹೋರಾಟದ ಫಲವಾಗಿದೆ ಎಂದರು.

ಕಲಬುರಗಿ ಜಯನಗರದ ಅನುಭವ ಕಲ್ಯಾಣ ಮಂಟಪದಲ್ಲಿ ಶರಣ ಹಡಪದ ಅಪ್ಪಣ್ಣನವರ ಮೂರ್ತಿ ಸ್ಥಾಪನೆ ಹಾಗೂ ವಿಶ್ವವಿದ್ಯಾಲಯದಲ್ಲಿ ಹಡಪದ ಅಪ್ಪಣ್ಣ ಅಧ್ಯಯನ ಪೀಠ ಸ್ಥಾಪನೆಗೆ ಸರ್ಕಾರದಿಂದ ₹1 ಕೋಟಿ ಅನುದಾನ ಪಡೆಯಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಕಲಬುರಗಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಹಾಗೂ ಮಹಾನಗರ ಪಾಲಿಕೆಯ ಮೇಯರ್ ಪದಗ್ರಹಣ ಕಾರ್ಯಕ್ರಮದ ನಿಮಿತ್ತ ಹೈಮಾಸ್ಟ್ ಕಂಬದ ದೀಪವನ್ನು ಅವರ ಅನುಪಸ್ಥಿತಿಯಲ್ಲಿ ಪೂಜ್ಯರು ಹಾಗೂ ಸಮಾಜದ ಬಂಧುಗಳ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಜ್ಯೋತಿ ಬೆಳಗಿಸಲಾಯಿತು.

ಹಡಪದ ಅಪ್ಪಣ್ಣನವರ ಆದರ್ಶ ಪಾಲಿಸಿ: ಸಿದ್ದಲಿಂಗ ಮಹಾಸ್ವಾಮೀಜಿ

ದಿವ್ಯ ಸಾನಿಧ್ಯ ವಹಿಸಿದ್ದ ಪೇಠ ಶಿರೂರಿನ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಹಡಪದ ಅಪ್ಪಣ್ಣನವರನ್ನು ತಮ್ಮ ಆಪ್ತ ಕಾರ್ಯದರ್ಶಿಯಾಗಿ ನೇಮಿಸಿದ್ದರು. ಹಡಪದ ಅಪ್ಪಣ್ಣನವರು ಬೆಳಗ್ಗೆಯಿಂದ ರಾತ್ರಿ ವರೆಗೆ ಬಸವಣ್ಣನವರ ಸೇವೆಯಲ್ಲಿ ನಿರತರಾಗಿದ್ದರು ಎಂದು ಹೇಳಿದರು.

ಸಮಾಜದಲ್ಲಿ ಒಗ್ಗಟ್ಟು ಇದ್ದರೆ ಯಾರಿಂದಲೂ ಸಮಾಜಕ್ಕೆ ಧಕ್ಕೆ ಉಂಟುಮಾಡಲು ಸಾಧ್ಯವಿಲ್ಲ. ಕಾಯಕ ವೃತ್ತಿಯ ಮೂಲಕ ಜೀವನ ಸಾಗಿಸುತ್ತಾ ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಬೇಕು. ಹಡಪದ ಅಪ್ಪಣ್ಣನವರ ವಚನಗಳನ್ನು ಮಕ್ಕಳಿಗೆ ಪರಿಚಯಿಸಬೇಕು ಎಂದು ಸಲಹೆ ನೀಡಿದರು.

ಪ್ರತಿಯೊಬ್ಬರೂ ಹಣೆಗೆ ವಿಭೂತಿ ಧರಿಸಿ, ಲಿಂಗಪೂಜೆ, ರುದ್ರಾಕ್ಷಿ ಹಾಗೂ ಭಸ್ಮ ಧಾರಣೆ ಮಾಡಬೇಕು. ಪ್ರತಿಯೊಂದು ಮನೆಯಲ್ಲಿ ಧರ್ಮಗುರುಗಳ ಭಾವಚಿತ್ರವನ್ನು ಇರಿಸಿಕೊಳ್ಳಬೇಕು ಎಂದರು.

ಹಡಪದ ಅಪ್ಪಣ್ಣ ಸಮಾಜಕ್ಕೆ ಬಾಲಬ್ರಹ್ಮಚಾರಿ ರಾಜಶಿವಯೋಗಿ ಮಹಾಸ್ವಾಮಿಗಳಂತಹ ಮಹನೀಯರು ದೊರೆತಿರುವುದು ಸಮಾಜದ ಪುಣ್ಯವಾಗಿದೆ ಎಂದು ಹೇಳಿದರು.

ನಿರಂತರ ರುದ್ರಾಭಿಷೇಕದಿಂದ ಭಕ್ತರಿಗೆ ಆತ್ಮಸ್ಥೈರ್ಯ

ಆಶೀರ್ವಚನ ನೀಡಿದ ಶಹಾಬಾದಿನ ಬಾಲಬ್ರಹ್ಮಚಾರಿ ರಾಜಶಿವಯೋಗಿ ಮಹಾಸ್ವಾಮಿಗಳು, ಒಂದು ತಿಂಗಳ ಕಾಲ ಹಡಪದ ಅಪ್ಪಣ್ಣನವರ ಮೂರ್ತಿಗೆ ನಿರಂತರ ರುದ್ರಾಭಿಷೇಕ ನಡೆಸಿದ ಸಮಾಜದ ಬಂಧುಗಳು ಭಕ್ತಿಭಾವದಿಂದ ಸೇವೆ ಸಲ್ಲಿಸಿದ್ದಾರೆ. ಈ ಸೇವೆಯಿಂದ ಭಕ್ತರಿಗೆ ಆತ್ಮಸ್ಥೈರ್ಯ ದೊರಕಲಿ ಹಾಗೂ ಕಷ್ಟ-ಕಾರ್ಪಣ್ಯಗಳು ದೂರವಾಗಲಿ ಎಂದು ಆಶಿಸಿದರು.

ಸರ್ಕಾರದ ಸೌಲಭ್ಯಗಳು ಹೋರಾಟದ ಫಲ: ಬಸವರಾಜ ಹಡಪದ

‘ಉಕ್ಕಿನ ಮನುಷ್ಯ’ ಎಂಬ ಬಿರುದು ಪಡೆದಿರುವ ಕಲಬುರಗಿ ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಹಡಪದ ಸುಗೂರ ಎನ್. ಮಾತನಾಡಿ, ಸಮಾಜದ ಸಂಘಟಿತ ಹೋರಾಟದ ಫಲವಾಗಿ ಹಡಪದ ಅಪ್ಪಣ್ಣ ದೇವಸ್ಥಾನಗಳ ಅಭಿವೃದ್ಧಿ ಸೇರಿದಂತೆ ಜಿಲ್ಲೆಯಲ್ಲಿ ಹಲವು ಸೌಲಭ್ಯಗಳು ದೊರೆತಿವೆ. ಮುಂದೆಯೂ ಸಮಾಜದ ಬಂಧುಗಳು ಸಂಘಟನೆಗೆ ಕೈಜೋಡಿಸಿ ಸಮಾಜದ ಹಿತಕ್ಕಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.

ಶಿವಶರಣಪ್ಪ ಹಡಪದ ಹಾಗರಗಿ ಮಾತನಾಡಿ, ಸಮಾಜದ ಮೇಲೆ ಜಾತಿನಿಂದನೆ ಮಾಡುವವರ ವಿರುದ್ಧ ಕಾನೂನು ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ್ರಕಾಶ ಹಡಪದ ಕಟ್ಟಿಮನಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆನಂದ ಖೇಳಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಹಡಪದ ನೀಲೂರ, ಜಿಲ್ಲಾ ಖಜಾಂಚಿ ಶಿವಾನಂದ ಬಬಲಾದಿ, ಜಿಲ್ಲಾ ಉಪಾಧ್ಯಕ್ಷ ರುದ್ರಮಣಿ ಅಪ್ಪಣ್ಣ ಬಟಗೇರಾ, ಮಹಾಂತೇಶ ಇಸ್ಲಾಂಪೂರೆ, ಜಿಲ್ಲಾ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ ಬಗದುರಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಕಲಬುರಗಿ ನಗರಾಧ್ಯಕ್ಷ ಮಲ್ಲಿಕಾರ್ಜುನ ಹಡಪದ ಸಾವಳಗಿ ಸ್ವಾಗತ ಭಾಷಣ ಮಾಡಿದರು. ಕಲಬುರಗಿ ತಾಲೂಕು ಅಧ್ಯಕ್ಷ ಚಂದ್ರಶೇಖರ ತೊನಸನಹಳ್ಳಿ, ಮಲ್ಲಣ್ಣ ಫರಹತಾಬಾದ್, ರುದ್ರಮಣಿ ಅಪ್ಪಣ್ಣ ಬಟಗೇರಾ, ಮಹಾಂತೇಶ ಇಸ್ಲಾಂಪೂರೆ, ದೇವೇಂದ್ರ ಹಡಪದ ಕಟ್ಟಿಸಂಗಾವಿ, ಶಿವಕುಮಾರ್ ಸಿಂದಗಿ, ಶ್ರೀಮಂತ ಅರನೂರ, ಸಂತೋಷ ಮಡಕಿ, ಗಂಗಾಧರ ಹಡಪದ, ಅನಿಲ ಯು. ಲೈಕ್, ಮಂಜುನಾಥ್ ಅವರಾದ, ಕಂಠು ಹಡಪದ, ಅಪ್ಪಣ್ಣ ಬಿದ್ದಾಪುರ, ಶಂಕರ ಹರವಾಳ, ಶಿವಲಿಂಗ ಶಹಾಬಾದ್, ಸಂಜೀವಕುಮಾರ ಹಡಪದ ಬೆಳಮಗಿ, ರಮೇಶ್ ಕವಲಗಾ, ಸಿದ್ದಪ್ಪ ಹಡಪದ ಯಳಸಂಗಿ, ನಿಂಗಣ್ಣ ಅವನೂರ, ಶರಣು ಹಡಪದ ನಂದೂರ, ಭೀಮು ಹಡಪದ ನಂದೂರ, ಪರಮೇಶ್ವರ ಹಡಪದ ಕಲಬುರಗಿ, ರಮೇಶ್ ಹಡಪದ ಕರಾರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಶಿಕ್ಷಕ ಭಗವಂತ ಹಡಪದ ಕಿರಣಗಿ ನಿರೂಪಿಸಿದರು. ಕಲಬುರಗಿ ಜಿಲ್ಲೆಯ ಬಸವಪ್ರಿಯ ಸೇವಾ ಸಮೃದ್ಧಿ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪ್ರಸಾದ ವ್ಯವಸ್ಥೆ ಮಾಡಿದರು.

ಶ್ರಾವಣ ಮಾಸದ ಉತ್ಸವದ ಮುಕ್ತಾಯ ಸಮಾರಂಭದಲ್ಲಿ ಮಹಿಳಾ ತಾಯಂದಿರು, ಸಮಾಜದ ಗುರು-ಹಿರಿಯರು ಹಾಗೂ ಸಮಾಜದ ಬಗ್ಗೆ ಕಾಳಜಿ ಹೊಂದಿರುವ ಯುವ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button