ಜಿಲ್ಲೆ ಸುದ್ದಿಯಾದಗಿರಿ

ಸುರಪುರ ತಾಲೂಕಿನ ಎಲ್ಲ ಗ್ರಾಮಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ

ರೈತರಿಗೆ ತುರ್ತು ಪರಿಹಾರ ಕಲ್ಪಿಸಲು ಸರ್ಕಾರಕ್ಕೆ ಅಮೀನರೆಡ್ಡಿ ಯಾಳಗಿ ಒತ್ತಾಯ

ಕೆಂಭಾವಿ: ಪ್ರಸಕ್ತ ಸಾಲಿನಲ್ಲಿ ಸಮರ್ಪಕ ಮಳೆಯಾಗದೆ ಕೃಷಿ ಚಟುವಟಿಕೆಗಳು ಹಿನ್ನಡೆ ಕಂಡಿರುವ ಹಿನ್ನೆಲೆಯಲ್ಲಿ ಶಹಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸುರಪುರ ತಾಲೂಕಿನ ಎಲ್ಲ ಗ್ರಾಮಗಳನ್ನು ತಕ್ಷಣ ಬರಪೀಡಿತ ಪ್ರದೇಶವೆಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರಿಗೆ ಅಗತ್ಯ ಪರಿಹಾರ ಒದಗಿಸಬೇಕು ಎಂದು ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಯಾಳಗಿ ಸರ್ಕಾರವನ್ನು ಒತ್ತಾಯಿಸಿದರು.

ಸುರಪುರ ತಹಶೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಮಳೆ ಕೊರತೆಯಿಂದ ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ತೀವ್ರವಾಗಿ ಬಾಧಿತವಾಗಿವೆ. ಬಿತ್ತನೆ ಮಾಡಿರುವ ಬೆಳೆಗಳು ನೀರಿನ ಕೊರತೆಯಿಂದ ಒಣಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆಯೂ ಎದುರಾಗಿದೆ ಎಂದು ಹೇಳಿದರು.

ತಕ್ಷಣ ಪರಿಹಾರ ಕ್ರಮ ಕೈಗೊಳ್ಳಲಿ

ರೈತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಕೂಡಲೇ ಪರಿಸ್ಥಿತಿಯನ್ನು ಪರಿಶೀಲಿಸಿ, ಶಹಾಪುರ ಕ್ಷೇತ್ರದ ವ್ಯಾಪ್ತಿಗೆ ಬರುವ ಸುರಪುರ ತಾಲೂಕಿನ ಎಲ್ಲ ಗ್ರಾಮಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಬರ ಪರಿಸ್ಥಿತಿಯಿಂದ ತೊಂದರೆಗೊಳಗಾಗಿರುವ ರೈತರಿಗೆ ಸೂಕ್ತ ಪರಿಹಾರ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸರ್ಕಾರ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅಮೀನರೆಡ್ಡಿ ಯಾಳಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಹೇಶ್ ಸುಬೇದಾರ್, ಲಕ್ಷ್ಮೀಕಾಂತ ಪಾಟೀಲ್, ಡಾ. ಚಂದ್ರಶೇಖರ್ ಸುಬೇದಾರ್, ಬಸನಗೌಡ ಪಾಟೀಲ್, ಬಸವರಾಜ ವಿಭೂತಿಹಳ್ಳಿ, ರಾಯನಗೌಡ (ರಾಮನಗೌಡ) ಪೊಲೀಸ್ ಪಾಟೀಲ್, ಗುರುಕಾಮ, ಸಂಗಣ್ಣ ತುಂಬಗಿ, ಮಲ್ಲನಗೌಡ ಯವೂರ್, ಸಿದ್ದನಗೌಡ ವಂದಗನೂರ್, ತಿರುಪತಿ, ಶಿವರಾಜ ದೇಶಮುಖ್, ಪ್ರಶಾಂತ್ ಬೆಕಿನಾಳ್, ಬಸನಗೌಡ, ಅಡಿವೆಪ್ಪ ಜಾಕಾ, ಶಾಂತಪ್ಪ ನಾಗನೂರ್, ರಮೇಶ್ ಸೊನ್ನದ್, ಬಸಣ್ಣಿ ಮುತ್ಯಾ ಸೇರಿದಂತೆ ಕೆಂಭಾವಿ ಹೋಬಳಿಯ ರೈತರು, ಮಹಿಳೆಯರು, ಯುವಕರು ಹಾಗೂ ಪ್ರಗತಿಪರ ಚಿಂತಕರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button