ಕಲಬುರಗಿರಾಜ್ಯ

ಬಸವತತ್ವ ವಿರೋಧಿ ಸಮಾವೇಶ ಖಂಡಿಸಿ ಸೆ. 25ರಂದು ಬೃಹತ್ ರ‍್ಯಾಲಿ

ಕಲಬುರಗಿಯಲ್ಲಿ ಬಹಿರಂಗ ಸಭೆ; ಹಿಂದೂತ್ವದ ಹೆಸರಿನಲ್ಲಿ ಶರಣ ತತ್ವಗಳನ್ನು ತಿರುಚುವ ಪ್ರಯತ್ನ ಸಲ್ಲದು: ಡಾ. ಮೀನಾಕ್ಷಿ ಬಾಳಿ

ಕಲಬುರಗಿ, ಸೆ. 15: ನಗರದಲ್ಲಿ ಬಸವಾದಿ ಶರಣರ ತತ್ವಗಳಿಗೆ ವಿರುದ್ಧವಾಗಿ ಹಿಂದೂತ್ವದ ಸಮಾವೇಶ ಹಮ್ಮಿಕೊಂಡಿರುವುದನ್ನು ಖಂಡಿಸಿ ಸೆಪ್ಟೆಂಬರ್ 25ರಂದು ಬೆಳಿಗ್ಗೆ 11 ಗಂಟೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲಾಗುವುದು. ಬಳಿಕ ಜಗತ್ ವೃತ್ತದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗುವುದು ಎಂದು ಬಸವತತ್ವ ಹಾಗೂ ಸಂವಿಧಾನ ಸಂರಕ್ಷಣೆ ಹೋರಾಟ ಸಮಿತಿಯ ಡಾ. ಮೀನಾಕ್ಷಿ ಬಾಳಿ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಾದಿ ಶರಣರ ತತ್ವಗಳಿಗೆ ವಿರುದ್ಧವಾಗಿ ನಡೆಯುತ್ತಿರುವ ಸಮಾವೇಶದಿಂದ ಬಸವಾನುಯಾಯಿಗಳು ದೂರ ಉಳಿಯಬೇಕು. ಬಸವತತ್ವವನ್ನು ಯಾವುದೇ ರಾಜಕೀಯ ಅಥವಾ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳಬಾರದು ಎಂದು ಹೇಳಿದರು.

ವಚನಗಳನ್ನು ತಿರುಚುವ ಪ್ರಯತ್ನ:
ಶರಣ ಸಿದ್ಧಾಂತವನ್ನು ನಿರ್ನಾಮ ಮಾಡಲು ಸಾಧ್ಯವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಸಂವಿಧಾನದ ಆಶಯದಿಂದಾಗಿ ಬಹುಸಂಖ್ಯಾತರು ಶಿಕ್ಷಣ ಪಡೆದು ವಚನಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ವೈದಿಕ ಆಚರಣೆಗಳಿಂದ ದೂರ ಸರಿಯುತ್ತಿರುವುದನ್ನು ಕಂಡು ಕೆಲವರು ವಚನಗಳನ್ನು ತಿರುಚುವ ಹಾಗೂ ಶರಣರ ಕ್ರಾಂತಿಕಾರಿ ಆಶಯಗಳನ್ನು ಮಸಳಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಬಸವಾದಿ ಶರಣರನ್ನು ಹಿಂದೂ ಧರ್ಮದ ಚೌಕಟ್ಟಿನಲ್ಲಿ ಜೋಡಿಸುವ ಪ್ರಯತ್ನ ಸರಿಯಲ್ಲ. ಶರಣರ ಚಿಂತನೆ, ಕಾಯಕ, ದಾಸೋಹ ಹಾಗೂ ಸಮಾನತೆಯ ಆಶಯಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವುದನ್ನು ಬಸವಾನುಯಾಯಿಗಳು ಒಪ್ಪುವುದಿಲ್ಲ ಎಂದರು.

ಕಲಬುರಗಿ ಬಸವತತ್ವದ ನೆಲ:
ಶರಣ, ಸಂತ ಹಾಗೂ ಸೂಫಿ ತತ್ವಗಳ ಪ್ರಯೋಗಭೂಮಿಯಾಗಿರುವ ಕಲಬುರಗಿಯಲ್ಲಿ ಕೋಮು ದ್ವೇಷಕ್ಕೆ ಅವಕಾಶ ನೀಡಬಾರದು. ಬಸವಾದಿ ಶರಣರ ಹೆಸರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮವು ಸಮಾಜದಲ್ಲಿ ದ್ವೇಷ ಅಥವಾ ಸಂಘರ್ಷಕ್ಕೆ ಕಾರಣವಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಬಾಳಿ ಆಗ್ರಹಿಸಿದರು.

ಕಲಬುರಗಿ ಬುದ್ಧ, ಬಸವ ಹಾಗೂ ಬಾಬಾಸಾಹೇಬ ಅಂಬೇಡ್ಕರ್ ಅವರ ವಿಚಾರಧಾರೆಗಳಿಗೆ ಹೆಸರಾದ ನಗರ. ಇಲ್ಲಿ ಶರಣರ ಮೂಲ ಆಶಯಗಳನ್ನು ತಿರುಚುವ ಪ್ರಯತ್ನಗಳಿಗೆ ಅವಕಾಶ ನೀಡಬಾರದು. ಸೆ. 25ರಂದು ನಡೆಯುವ ಪ್ರತಿಭಟನಾ ರ‍್ಯಾಲಿ ಹಾಗೂ ಬಹಿರಂಗ ಸಭೆಯಲ್ಲಿ ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರೊ. ಆರ್.ಕೆ. ಹುಡಗಿ, ಅರ್ಜುನ್ ಭದ್ರೆ, ಮರೆಪ್ಪ ಹಳ್ಳಿ, ಪಿಡ್ಡಪ್ಪ ಜಾಲಗಾರ್, ಶಾಮ್ ನಾಟೀಕಾರ್, ಸುಧಾಮ್ ಧನ್ನಿ, ಆರ್.ಜಿ. ಶೆಟಗಾರ್, ರವೀಂದ್ರ ಶಾಬಾದಿ, ರವಿ ಸಜ್ಜನ್, ಶಿವಶರಣಪ್ಪ ಮೂಳೆಗಾಂವ್, ಮಹೇಶ್ ಎಸ್.ಪಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button