ಕಲಬುರಗಿಜಿಲ್ಲೆ ಸುದ್ದಿ

ಸೆ.17ರ ಇತಿಹಾಸ ಅರಿತಾಗಲೇ ಸ್ವಾತಂತ್ರ್ಯದ ಅರ್ಥ ತಿಳಿಯಲಿದೆ

ಚಿತ್ತಾಪುರ: ಭಾರತಕ್ಕೆ 1947ರ ಆಗಸ್ಟ್ 15ರಂದು ಸ್ವಾತಂತ್ರ್ಯ ದೊರೆತರೆ, ಹೈದರಾಬಾದ್ ಕರ್ನಾಟಕ (ಕಲ್ಯಾಣ ಕರ್ನಾಟಕ) ಭಾಗವು 1948ರ ಸೆಪ್ಟೆಂಬರ್ 17ರಂದು ವಿಮೋಚನೆಗೊಂಡಿತು. ಈ ಭಾಗದ ವಿಮೋಚನೆಯ ಹಿಂದೆ ಸಾಕಷ್ಟು ರಕ್ತಸಿಕ್ತ ಇತಿಹಾಸವಿದ್ದು, ಸ್ವಾತಂತ್ರ್ಯದ ನಿಜವಾದ ಅರ್ಥ ತಿಳಿಯಬೇಕಾದರೆ ಸೆ.17ರ ಇತಿಹಾಸವನ್ನು ಅರಿಯಬೇಕು ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.

ಪಟ್ಟಣದ ಪ್ರಜಾಸೌಧ ಆವರಣದಲ್ಲಿ ಗುರುವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ, ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕದ ವಿಮೋಚನಾ ಹೋರಾಟವು ಈ ಭಾಗದ ಜನರ ಹೋರಾಟ, ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿದೆ. ಈ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದು ಅವರು ಹೇಳಿದರು.

ಸುಲೇಪೇಟ ಏಕದಂಡಗಿ ಮಠದ ಶ್ರೀ ದೊಡ್ಡೇಂದ್ರ ಮಹಾಸ್ವಾಮಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಬಳೂಂಡಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಬಿರಾದಾರ, ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಪ್ರಹ್ಲಾದ ವಿಶ್ವಕರ್ಮ ಹಾಗೂ ಟಿಎಪಿಸಿಎಂ ಅಧ್ಯಕ್ಷ ದೇವಿಂದ್ರ ಅರಣಕಲ್ ಮಾತನಾಡಿದರು.

ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಕೈಲಾಸಪತಿ ವಿಶ್ವಕರ್ಮ ಉಪನ್ಯಾಸ ನೀಡಿದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಹ್ಮದ್ ಅಕ್ರಂ ಪಾಷಾ, ಗ್ರೇಡ್–2 ತಹಸೀಲ್ದಾರ್ ರಾಜಕುಮಾರ ಮರತೂರಕರ, ಸಿಪಿಐ ಎಸ್.ಸಿ. ಪಾಟೀಲ, ಪಿಎಸ್‌ಐ ಮಂಜುನಾಥರೆಡ್ಡಿ, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಿಶ್ವಕರ್ಮ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.

ಡಾ. ಶಂಕರ ಕಣ್ಣಿ ನಿರೂಪಿಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಶರಣಪ್ಪ ಮಂಠಾಳೆ ವಂದಿಸಿದರು.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button