ಆರ್ಇಎಸ್ಸಿ ಹಳೆಯ ವಿದ್ಯಾರ್ಥಿಗಳಿಂದ ವಿಭಿನ್ನ ಶಿಕ್ಷಕರ ದಿನಾಚರಣೆ

ಚಿತ್ತಾಪುರ: ಶಾಲಾ ದಿನಗಳು ಮುಗಿದು ಹಲವು ವರ್ಷಗಳು ಕಳೆದರೂ ಗುರುಗಳ ಮೇಲಿನ ಗೌರವ ಹಾಗೂ ವಿದ್ಯಾರ್ಥಿಗಳ ಮೇಲಿನ ಶಿಕ್ಷಕರ ಪ್ರೀತಿ ಮಾಸುವುದಿಲ್ಲ ಎಂಬುದಕ್ಕೆ ಪಟ್ಟಣದ ಒಳಾಂಗಣ ಕ್ರೀಡಾಂಗಣದ ಸಭಾಂಗಣದಲ್ಲಿ ನಡೆದ ಆರ್ಇಎಸ್ಸಿ ಹಳೆಯ ವಿದ್ಯಾರ್ಥಿಗಳ ಶಿಕ್ಷಕರ ದಿನಾಚರಣೆ ಸಾಕ್ಷಿಯಾಯಿತು.
ಹಲವು ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಸೇರಿದ ಹಳೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳನ್ನು ಆತ್ಮೀಯವಾಗಿ ಸನ್ಮಾನಿಸಿ, ಶಾಲಾ ದಿನಗಳ ಸಿಹಿ ನೆನಪುಗಳನ್ನು ಮೆಲುಕು ಹಾಕಿದರು. ಗುರು-ಶಿಷ್ಯರ ಆತ್ಮೀಯ ಮಾತುಕತೆ ಹಾಗೂ ಭಾವನಾತ್ಮಕ ಕ್ಷಣಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.
ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಆರ್ಇಎಸ್ಸಿ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಶಿಕ್ಷಕರಾದ ಮಸ್ತಾನ್ ಪಟೇಲ್, ಪಂಪಾಪತಿ, ಮಲ್ಲಿಕಾರ್ಜುನ, ಖಮರುಸಾ ಬೇಗಂ, ಶಶಿರೇಖಾ ಪವಾರ್, ಸಾವಿತ್ರಿ, ಮನುಜಾ ಹಾಗೂ ಸುಂದರಾ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಮಾತನಾಡಿದ ಯಾದಗಿರಿಯ ಸರ್ಕಾರಿ ಬಾಲಕಿಯರ ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಹರೀಶ್ ರಾಠೋಡ, ‘ವಿದ್ಯಾರ್ಥಿಗಳ ಬದುಕಿನಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಅಂಕ, ಪದವಿ ಅಥವಾ ಉದ್ಯೋಗಕ್ಕಿಂತ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಶಿಕ್ಷಕರ ಮಾರ್ಗದರ್ಶನ ಮುಖ್ಯ. ಗುರುಗಳಿಗೆ ಗೌರವ ಸಲ್ಲಿಸುವ ಸಂಸ್ಕೃತಿ ನಿರಂತರವಾಗಿ ಮುಂದುವರಿಯಬೇಕು’ ಎಂದರು.
ರಾಜಶೇಖರ್ ಬಳ್ಳಾ ಮಾತನಾಡಿ, ‘ವಿದ್ಯಾಭ್ಯಾಸ ಮುಗಿಸಿ ಜೀವನದ ವಿವಿಧ ಕ್ಷೇತ್ರಗಳಲ್ಲಿ ನೆಲೆಸಿರುವ ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಮರೆಯದೆ ಮತ್ತೆ ಒಂದೆಡೆ ಸೇರಿ ಗೌರವಿಸುತ್ತಿರುವುದು ಸಂತಸದ ಸಂಗತಿ. ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೂ ಗುರು-ಶಿಷ್ಯರ ಸಂಬಂಧದ ಮಹತ್ವವನ್ನು ತಿಳಿಸುತ್ತವೆ’ ಎಂದರು.
ಶಿಕ್ಷಕ ಶಂಕರ್ ಮಾತನಾಡುವ ವೇಳೆ ಭಾವುಕರಾದರು. ‘ವಿದ್ಯಾರ್ಥಿಗಳು ತಮ್ಮನ್ನು ನೆನಪಿಸಿಕೊಂಡು ಗೌರವ ನೀಡಿರುವುದು ಜೀವನದಲ್ಲಿ ಮರೆಯಲಾಗದ ಕ್ಷಣ. ವಿದ್ಯಾರ್ಥಿಗಳ ಪ್ರೀತಿ ಮತ್ತು ಅಭಿಮಾನವೇ ಶಿಕ್ಷಕರಿಗೆ ಸಿಗುವ ಅತ್ಯಂತ ದೊಡ್ಡ ಬಹುಮಾನ’ ಎಂದು ಹೇಳಿದರು.
ಶಿಕ್ಷಕರ ದಿನಾಚರಣೆಯನ್ನು ಕೇವಲ ಸನ್ಮಾನ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ ಶಿಕ್ಷಕರಿಗಾಗಿ ವಿವಿಧ ಮನರಂಜನಾ ಆಟಗಳನ್ನು ಆಯೋಜಿಸಲಾಗಿತ್ತು. ಶಿಕ್ಷಕರು ಉತ್ಸಾಹದಿಂದ ಪಾಲ್ಗೊಂಡರು. ಆಟಗಳಲ್ಲಿ ವಿಜೇತರಾದವರಿಗೆ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸಲು ಸಾಧ್ಯವಾಗದ ಹಳೆಯ ವಿದ್ಯಾರ್ಥಿಗಳು ಆನ್ಲೈನ್ ನೇರಪ್ರಸಾರದ ಮೂಲಕ ಗುರುಗಳಿಗೆ ಶುಭಾಶಯ ಕೋರಿದರು. ಅಮೆರಿಕಾದ ಪಲ್ಲವಿ, ಮುಂಬೈನ ಶಾಂತಿ ಚವ್ಹಾಣ, ಬೆಂಗಳೂರಿನ ಮಲ್ಲು ಎಸ್.ಬಿ. ಹಾಗೂ ಬೆಳಗಾವಿಯ ಆನಂದ ಪಾಟೀಲ್ ಆನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಜಹೀರ್ ಅಹಮದ್, ಅಬ್ದುಲ್ ವಾಜೀದ್, ನಾಮದೇವ್, ತಿರುಪತಿ ಚವ್ಹಾಣ, ವಿಶ್ವನಾಥ್ ಕಾಶಿ, ಇಕ್ವಾಲ್, ಮಲ್ಲಿಕಾರ್ಜುನ, ಮುಖಿಮ್, ಅಬ್ದುಲ್ ಖಾದರ್, ಮಹೇಶ್ ಕಾಶಿ, ರವಿ ಚವ್ಹಾಣ, ನಾಗರಾಜ್, ಮಹೇಶ್, ಪ್ರೀತಿ, ಮೊಷಿನ್ ಸೇರಿದಂತೆ ಹಲವು ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



