ಕಲಬುರಗಿಜಿಲ್ಲೆ ಸುದ್ದಿ

ಮತದಾರರ ಪಟ್ಟಿ ಪರಿಷ್ಕರಣೆ: ವಿಚಾರಣೆಗೆ ಹಾಜರಾಗಲು ಮನವಿ

ಜೇವರ್ಗಿ, ಸೆ.18: ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗದೆ, ಚುನಾವಣಾ ಅಧಿಕಾರಿಗಳ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಮಾರುತಿ ಬ್ಯಾಕೋಡ್ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕುರಿತು ವಿಚಾರಣೆ ನಡೆಸಿ ಅವರು ಮಾತನಾಡಿದರು.

ಮತದಾರರ ಪಟ್ಟಿಯಲ್ಲಿರುವ ತಾಂತ್ರಿಕ ದೋಷಗಳು, ಹೆಸರು ಅಥವಾ ವಯಸ್ಸಿನ ವ್ಯತ್ಯಾಸಗಳು ಹಾಗೂ ವಾಸಸ್ಥಳಕ್ಕೆ ಸಂಬಂಧಿಸಿದ ಗೊಂದಲಗಳನ್ನು ಪರಿಹರಿಸಲು ಆಯೋಗದ ನಿಯೋಜಿತ ವಿಶೇಷ ಚುನಾವಣಾ ಅಧಿಕಾರಿಗಳು ನೋಟಿಸ್‌ಗಳನ್ನು ಜಾರಿಗೊಳಿಸುತ್ತಿದ್ದಾರೆ. ನೋಟಿಸ್‌ ಬಂದ ತಕ್ಷಣ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಮತದಾನದ ಹಕ್ಕನ್ನು ಸುರಕ್ಷಿತವಾಗಿರಿಸಿಕೊಳ್ಳಲು ಈ ಪ್ರಕ್ರಿಯೆ ಅಗತ್ಯವಾಗಿದೆ ಎಂದು ತಿಳಿಸಿದರು.

ನೋಟಿಸ್‌ನಲ್ಲಿ ನಿಗದಿಪಡಿಸಿರುವ ದಿನಾಂಕ, ಸಮಯ ಹಾಗೂ ವಿಚಾರಣಾ ಕೇಂದ್ರಕ್ಕೆ ಅಗತ್ಯ ದಾಖಲೆಗಳೊಂದಿಗೆ ಮತದಾರರು ಹಾಜರಾಗಬೇಕು. ದಾಖಲೆಗಳ ಪರಿಶೀಲನೆಯ ಸಂದರ್ಭದಲ್ಲಿ ಮತದಾರರ ನೇರ ಭೌತಿಕ ಹಾಜರಾತಿ ಕಡ್ಡಾಯವಾಗಿದ್ದು, ವಿಚಾರಣೆಗೆ ಗೈರುಹಾಜರಾದಲ್ಲಿ ಕರಡು ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಸಾಧ್ಯತೆ ಇದೆ. ಆದ್ದರಿಂದ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಪ್ರಕ್ರಿಯೆಯಲ್ಲಿ ಭಾಗವಹಿಸಿ ಚುನಾವಣಾ ಅಧಿಕಾರಿಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜೇವರ್ಗಿ ಭಾಗದ ಸಾರ್ವಜನಿಕರು ವಿಶೇಷ ಪರಿಷ್ಕರಣೆ ಪ್ರಕ್ರಿಯೆಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಬೇಕು ಎಂದು ಮಾರುತಿ ಬ್ಯಾಕೋಡ್ ಹೇಳಿದರು.

ಈ ಸಂದರ್ಭದಲ್ಲಿ ಗೌಡಪ್ಪಗೌಡ ಮಾಗಣಗೇರಿ, ಶಬ್ಬಿರ್, ಶರಣು ನಾಟೇಕರ್ ಸೇರಿದಂತೆ ಹಲವರು ಇದ್ದರು.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button