ಗ್ರಾಮ ಪಂಚಾಯಿತಿಗೊಂದು ಆಧಾರ್ ಕೇಂದ್ರ ಸ್ಥಾಪನೆಗೆ ಆಗ್ರಹ

ಜೇವರ್ಗಿ, ಸೆ.18: ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರ ಸ್ಥಾಪಿಸಬೇಕು ಎಂದು ಡಾ. ವಿಷ್ಣು ಸೇನಾ ಸಮಿತಿ ತಾಲ್ಲೂಕು ಅಧ್ಯಕ್ಷ ಬಸವರಾಜ ಬಿ. ಬಾಗೇವಾಡಿ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಜೇವರ್ಗಿ ಹಾಗೂ ಯಡ್ರಾಮಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ–ಕಾಲೇಜುಗಳಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಆಧಾರ್ ಸೇವೆ ಅಗತ್ಯವಾಗಿದೆ. ಆದರೆ ಪಟ್ಟಣದಲ್ಲಿ ತಹಶೀಲ್ದಾರ್ ಕಚೇರಿ, ಎಸ್ಬಿಐ ಬ್ಯಾಂಕ್ ಹಾಗೂ ಅಂಚೆ ಕಚೇರಿಯಲ್ಲಿ ಮಾತ್ರ ಆಧಾರ್ ನೋಂದಣಿ ಕೇಂದ್ರಗಳಿವೆ. ಅಂಚೆ ಕಚೇರಿಯಲ್ಲಿದ್ದ ಕೇಂದ್ರವೂ ಸುಮಾರು 10–12 ದಿನಗಳಿಂದ ಬಂದ್ ಆಗಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ದೂರಿದರು.
ಆಧಾರ್ ನೋಂದಣಿ ಹಾಗೂ ತಿದ್ದುಪಡಿಗಾಗಿ ಗ್ರಾಮೀಣ ಭಾಗದಿಂದ ಬೆಳಗಿನ ಜಾವವೇ ಮಕ್ಕಳು ಸೇರಿದಂತೆ ಸಾರ್ವಜನಿಕರು ಪಟ್ಟಣಕ್ಕೆ ಬಂದು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿದೆ. ದಿನಕ್ಕೆ ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ಸೇವೆ ದೊರೆಯುತ್ತಿದ್ದು, ಉಳಿದವರು ಊಟ, ನೀರಿನ ವ್ಯವಸ್ಥೆಯೂ ಇಲ್ಲದೆ ವಾಪಸ್ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ವಿವಿಧ ಯೋಜನೆಗಳು, ಪಡಿತರ ಚೀಟಿ ಸೇರಿದಂತೆ ಹಲವು ಸೇವೆಗಳಿಗೆ ಆಧಾರ್ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಜನರಿಗೆ ಸ್ಥಳೀಯವಾಗಿಯೇ ಸೇವೆ ಒದಗಿಸುವ ಅಗತ್ಯವಿದೆ. ಆದ್ದರಿಂದ ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯಿತಿ ಕೇಂದ್ರಕ್ಕೊಂದು ಹಾಗೂ ಪ್ರತಿ ಹೋಬಳಿಗೊಂದು ಆಧಾರ್ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಆಧಾರ್ ಸೇವೆ ಹೆಸರಿನಲ್ಲಿ ಸಾರ್ವಜನಿಕರಿಂದ ₹300, ₹500 ಹಾಗೂ ₹1,000 ವರೆಗೆ ಹಣ ವಸೂಲಿ ಮಾಡುತ್ತಿರುವ ಆಪರೇಟರ್ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನಿಯಮ ಉಲ್ಲಂಘಿಸುವ ಆಪರೇಟರ್ಗಳ ಲಾಗಿನ್ ಸ್ಥಗಿತಗೊಳಿಸಿ, ಅವರ ಪರವಾನಗಿ ರದ್ದುಪಡಿಸಬೇಕು. ಬದಲಿಗೆ ಪ್ರಾಮಾಣಿಕ ಹಾಗೂ ನಿಷ್ಠಾವಂತ ಆಪರೇಟರ್ಗಳನ್ನು ನೇಮಿಸಿ ಸಾರ್ವಜನಿಕರಿಗೆ ಸುಲಭವಾಗಿ ಸೇವೆ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಪರಿದ್, ಸಿದ್ದಲಿಂಗ ಮಾಮೂರ್, ರವಿ ಸರ್ಕಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



