ಕಲಬುರಗಿಜಿಲ್ಲೆ ಸುದ್ದಿ

ಪ್ರತಾಪ್ ಸಿಂಹ ಬಂಧಿಸಿ ಗಡಿಪಾರು ಮಾಡಲು ಡಿಎಸ್‌ಎಸ್ ಆಗ್ರಹ

ಕಲಬುರಗಿ: ಕೋಮು ಗಲಭೆಗೆ ಪ್ರಚೋದನೆ ನೀಡಿ ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರನ್ನು ಬಂಧಿಸಿ, ಕರ್ನಾಟಕದಿಂದ ಗಡಿಪಾರು ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಭೀಮಮಾರ್ಗದ ಕಲಬುರಗಿ ಜಿಲ್ಲಾ ಘಟಕ ಆಗ್ರಹಿಸಿದೆ.

ಈ ಕುರಿತು ಸಂಘಟನೆಯ ಮುಖಂಡರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ನಡೆದ ಗಣೇಶೋತ್ಸವಕ್ಕೆ ಸಂಬಂಧಿಸಿದ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ, ರಾಜ್ಯದಾದ್ಯಂತ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಪ್ರತಾಪ್ ಸಿಂಹ ಅವರು ಮಾತನಾಡಿದ್ದಾರೆ ಎಂದು ಸಂಘಟನೆಯ ಮುಖಂಡರು ಆರೋಪಿಸಿದ್ದಾರೆ. ಇದನ್ನು ಖಂಡಿಸಿ ಡಿಎಸ್‌ಎಸ್ ಸೇರಿದಂತೆ ವಿವಿಧ ದಲಿತ ಸಂಘಟನೆಗಳು ಶಾಂತಿಯುತ ಹೋರಾಟ ನಡೆಸಿವೆ ಎಂದು ತಿಳಿಸಿದ್ದಾರೆ.

ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳು ಹಾಗೂ ದಲಿತ ಸಂಘರ್ಷ ಸಮಿತಿಯ ಹೋರಾಟದ ಕುರಿತು ಪ್ರತಾಪ್ ಸಿಂಹ ಅವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿ, ಸಮಾಜದಲ್ಲಿ ತಪ್ಪು ತಿಳಿವಳಿಕೆ ಮೂಡಿಸುವ ಹಾಗೂ ದಲಿತ–ಮುಸ್ಲಿಂ ಸಹೋದರತ್ವಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಮುಖಂಡರು ದೂರಿದ್ದಾರೆ.

ಗಣೇಶೋತ್ಸವದ ಮೆರವಣಿಗೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿರುವುದನ್ನು ಸ್ವಾಗತಿಸುತ್ತೇವೆ. ಆದರೆ ಎಫ್‌ಐಆರ್ ದಾಖಲಾದ ಬಳಿಕವೂ ಅವರನ್ನು ಬಂಧಿಸದಿರುವುದು ಕಾನೂನುಬಾಹಿರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಸಂಘಟನೆಯ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.

ಆದ್ದರಿಂದ ಪ್ರತಾಪ್ ಸಿಂಹ ಅವರನ್ನು ಕೂಡಲೇ ಬಂಧಿಸಿ, ಕರ್ನಾಟಕದಿಂದ ಗಡಿಪಾರು ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ದಲಿತ ಸಂಘರ್ಷ ಸಮಿತಿ ಭೀಮಮಾರ್ಗದ ಕಲಬುರಗಿ ಜಿಲ್ಲಾ ಘಟಕ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದೆ.

ಜಿಲ್ಲಾ ಸಂಚಾಲಕ ಕೈಲಾಸ ದೊಡ್ಮನಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಮಲ್ಲಿಕಾರ್ಜುನ ಬನಸೋಡೆ, ಶಿವಕುಮಾರ ಬಂದಗೆ, ನಿಲೇಶ್ ಗಾಯಕ್ವಾಡ್, ಪ್ರದೀಪ್ ಸಿಂಗೆ, ಸೋಮಶೇಖರ ವಠಾರ, ವಿಜಯಕುಮಾರ ಕೌಲಗಿ, ಮಹಾಂತೇಶ ಮಹಾಂತನೂರ, ಡಾ. ಕಾಶೀನಾಥ ಉಡಗಿ, ಸುನೀತಾ ನಂದೂರಕರ್, ಅನುರಾಧಾ ಕಾಂಬಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button