ಕಲಬುರಗಿಜಿಲ್ಲೆ ಸುದ್ದಿ

ಉಳುವವನೇ ಭೂಮಿಯ ಒಡೆಯ ಯೋಜನೆ ಸಮರ್ಪಕವಾಗಿ ಜಾರಿಗೆ ಆಗ್ರಹ

ಜೇವರ್ಗಿ: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಆಡಳಿತಾವಧಿಯಲ್ಲಿ ಜಾರಿಗೆ ತಂದ ‘ಉಳುವವನೇ ಭೂಮಿಯ ಒಡೆಯ’ ಕಾಯ್ದೆ ಲಕ್ಷಾಂತರ ಬಡ ಕುಟುಂಬಗಳಿಗೆ ಭೂಮಿಯ ಮಾಲೀಕತ್ವ ದೊರಕಿಸಿಕೊಟ್ಟಿದೆ. ಈ ಯೋಜನೆಯನ್ನು ಈಗಿನ ಸರ್ಕಾರ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಅಕ್ರಮ–ಸಕ್ರಮ ಸಮಿತಿ ಅಧ್ಯಕ್ಷ ಚಂದ್ರಶೇಖರ ಹರನಾಳ ಆಗ್ರಹಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರಾಜ ಅರಸು ಅವರು ದೀನದಲಿತರು, ಹಿಂದುಳಿದ ವರ್ಗಗಳು ಹಾಗೂ ಬಡವರ ಪರವಾಗಿ ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡಿದ್ದರು. ಅವರ ಆಡಳಿತದಲ್ಲಿ ಜಾರಿಗೆ ಬಂದ ‘ಉಳುವವನೇ ಭೂಮಿಯ ಒಡೆಯ’ ಕಾಯ್ದೆಯಿಂದ ಅನೇಕ ಬಡವರು ಕೃಷಿ ಭೂಮಿಯ ಮಾಲೀಕರಾಗಲು ಸಾಧ್ಯವಾಯಿತು ಎಂದರು.

ಜೇವರ್ಗಿ ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ಅಕ್ರಮ–ಸಕ್ರಮಕ್ಕೆ ಸಂಬಂಧಿಸಿದ ಅರ್ಜಿಗಳು ಬಾಕಿ ಉಳಿದಿವೆ. ಈ ಅರ್ಜಿಗಳನ್ನು ಅಕ್ರಮ–ಸಕ್ರಮ ಸಮಿತಿ ಮೂಲಕ ತ್ವರಿತವಾಗಿ ಪರಿಶೀಲಿಸಿ, ಅರ್ಹ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಪ್ರಾಮಾಣಿಕವಾಗಿ ವಿಲೇವಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಈ ಹಿಂದೆ ತಾಲ್ಲೂಕು ಆಡಳಿತವು ಬಡವರ ಅನೇಕ ಅರ್ಜಿಗಳನ್ನು ಪರಿಶೀಲಿಸದೆ, ನಮೂನೆ 50, 53 ಹಾಗೂ 57ರ ಅರ್ಜಿಗಳಿಗೆ ಸಂಬಂಧಿಸಿದಂತೆ ಸಾಗುವಳಿ ಚೀಟಿ ನೀಡಿಲ್ಲ ಹಾಗೂ ಪಹಣಿ ಮಾಡಿಲ್ಲ. ಈ ಸಮಸ್ಯೆಯನ್ನು ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಕೂಡಲೇ ಸರಿಪಡಿಸಬೇಕು ಎಂದು ಹೇಳಿದರು.

ಜೇವರ್ಗಿ ತಾಲ್ಲೂಕಿನಲ್ಲಿ ಸುಮಾರು 2 ಸಾವಿರ ಅರ್ಜಿಗಳು ಇನ್ನೂ ಬಾಕಿ ಉಳಿದಿವೆ. ಅಕ್ರಮ–ಸಕ್ರಮ ಸಮಿತಿ ಸದಸ್ಯರು ಹಾಗೂ ತಾಲ್ಲೂಕು ಆಡಳಿತದ ಅಧಿಕಾರಿಗಳು ಅರ್ಜಿದಾರರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ನಿಜವಾದ ಫಲಾನುಭವಿಗಳಿಗೆ ಸಾಗುವಳಿ ಚೀಟಿ ಹಾಗೂ ಪಹಣಿ ಮಾಡಿಕೊಡಬೇಕು ಎಂದು ಚಂದ್ರಶೇಖರ ಹರನಾಳ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸುಭಾಷ ಚನ್ನೂರ್, ಭೀಮರಾಯ ನಾಗನೂರ್, ವಿಶ್ವರಾಧ್ಯ ಗಂವ್ಹಾರ್, ರವಿ ಕುಳಗೇರಿ, ಶ್ರೀಹರಿ ಕರಕಳ್ಳಿ, ಮಹೇಶ್ ಕೊಕಿಲೆ, ಸಿದ್ದು ಕೇರೂರ್, ಮಲ್ಲಿಕಾರ್ಜುನ ಸಾತಖೇಡ, ಮರೇಪ್ಪ ಜನಿವಾರ, ರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button