ಕಲಬುರಗಿಜಿಲ್ಲೆ ಸುದ್ದಿ

ಎಸ್‌ಐಆರ್‌ ವಿರುದ್ಧ ಧರಣಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹ

ಕಲಬುರಗಿ, ಅ. 2: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಸ್ಥಗಿತಗೊಳಿಸಿ, ಪಟ್ಟಿಯಿಂದ ತಪ್ಪಾಗಿ ಹೊರಗುಳಿಸಿರುವ ಅರ್ಹ ಮತದಾರರ ಹೆಸರುಗಳನ್ನು ಮರುಸ್ಥಾಪಿಸಬೇಕು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ನಾಗರಿಕರ ಹಕ್ಕುಗಳ ರಕ್ಷಣಾ ಆಂದೋಲನದ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಧರಣಿ ನಡೆಸಿದರು.

ನಗರದ ಟೌನ್‌ಹಾಲ್‌ ಮುಂಭಾಗದ ಮಹಾತ್ಮ ಗಾಂಧೀಜಿ ಪ್ರತಿಮೆ ಎದುರು ನಡೆದ ಸತ್ಯಾಗ್ರಹದಲ್ಲಿ ಸಲೀಂ ಅಹಮದ್ ಚಿತ್ತಾಪುರ, ಡಾ. ಮಹೇಶಕುಮಾರ್ ರಾಠೋಡ್, ಕೆ. ನೀಲಾ, ಅಫಜಲ್ ಮಹಿಮೂದ್, ಶರಣಬಸಪ್ಪ ಮಮಶೆಟ್ಟಿ, ಮಹೇಶ್ ಎಸ್.ಬಿ., ಅಬ್ದುಲ್ ಜಬ್ಬಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಮತದಾರರ ನೋಂದಣಿ, ಹೆಸರುಗಳ ಸೇರ್ಪಡೆ-ತೆಗೆದುಹಾಕುವಿಕೆ ಹಾಗೂ ಮರುಸ್ಥಾಪನೆಗೆ ಸಂಬಂಧಿಸಿದಂತೆ ಹಲವು ಆಕ್ಷೇಪಗಳಿವೆ. ಮುಖ್ಯ ಚುನಾವಣಾ ಆಯುಕ್ತರ ಕಚೇರಿಯ ಕಾರ್ಯನಿರ್ವಹಣೆ ಮತ್ತು ನಿರ್ಧಾರ ಕೈಗೊಳ್ಳುವ ವಿಧಾನದ ಕುರಿತು ಸಾರ್ವಜನಿಕವಾಗಿ ಪ್ರಶ್ನೆಗಳು ಎದ್ದಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಚುನಾವಣಾ ಆಯುಕ್ತರ ನಡುವೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿರುವ ವರದಿಗಳೂ ಪ್ರಕಟವಾಗಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಕಾರ್ಯನಿರ್ವಹಣೆಯ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಕುರಿತು ಸಮಗ್ರ ಪರಿಶೀಲನೆ ಅಗತ್ಯ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಎಸ್‌ಐಆರ್‌ ಪ್ರಕ್ರಿಯೆಯಿಂದ ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದ ಅವರು, ಅಂತಹ ಮತದಾರರಿಗೆ ತಮ್ಮ ಹಕ್ಕುಗಳನ್ನು ಮರಳಿ ಪಡೆಯಲು ಪರಿಣಾಮಕಾರಿ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ, ಎಸ್‌ಐಆರ್‌ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು, ತಪ್ಪಾಗಿ ಹೊರಗುಳಿಸಿರುವ ಎಲ್ಲ ಅರ್ಹ ಮತದಾರರ ಹೆಸರುಗಳನ್ನು ಮರುಸೇರ್ಪಡೆಗೊಳಿಸಬೇಕು ಹಾಗೂ ಮತದಾರರ ಹಕ್ಕುಗಳ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಚುನಾವಣಾ ಆಯೋಗದ ಸ್ವತಂತ್ರತೆ ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಯ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕಾಪಾಡಲು ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿಯೂ ಸುಧಾರಣೆ ತರಬೇಕು ಎಂದು ಅವರು ಆಗ್ರಹಿಸಿದರು.

ಎಸ್‌ಐಆರ್‌ ಕುರಿತು ಆಕ್ಷೇಪ ಸಲ್ಲಿಸಿರುವವರು ಯಾರು, ಅವರ ಆಕ್ಷೇಪಗಳ ಹಿನ್ನೆಲೆ ಏನು ಎಂಬುದರ ಕುರಿತು ಸಮಗ್ರ ತನಿಖೆ ನಡೆಸಬೇಕು. ಮತದಾರರ ಹಕ್ಕುಗಳಿಗೆ ಧಕ್ಕೆ ಉಂಟಾಗಿರುವುದು ತನಿಖೆಯಲ್ಲಿ ದೃಢಪಟ್ಟರೆ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕಲಬುರಗಿಯಲ್ಲಿ ಅ. 2ರಂದು ಎಸ್‌ಐಆರ್‌ ರದ್ದತಿ, ಅರ್ಹ ಮತದಾರರ ಹೆಸರುಗಳ ಮರುಸೇರ್ಪಡೆ ಹಾಗೂ ಮುಖ್ಯ ಚುನಾವಣಾ ಆಯುಕ್ತರ ವಜಾಕ್ಕೆ ಆಗ್ರಹಿಸಿ ಧರಣಿ ನಡೆಸಲು ನಾಗರಿಕರ ಹಕ್ಕುಗಳ ರಕ್ಷಣಾ ಆಂದೋಲನ ಕರೆ ನೀಡಿತ್ತು.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button