ಅ. 5ಕ್ಕೆ ಕೋರ್ಟ್ ಕ್ಲೈಮ್ಯಾಕ್ಸ್ – ದರ್ಶನ್ ಪರದ ಎರಡು ಅರ್ಜಿಗಳ ಆದೇಶ ಕಾಯ್ದಿರಿಸಿದ ನ್ಯಾಯಾಲಯ

ಬೆಂಗಳೂರು: ನಟ ದರ್ಶನ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ 59ನೇ ಸಿಸಿಹೆಚ್ ಕೋರ್ಟ್‌ನಲ್ಲಿ ಇಂದು ಮಹತ್ವದ ವಿಚಾರಣೆ ನಡೆದಿದ್ದು, ದರ್ಶನ್ ಪರ ವಕೀಲರು ಸಲ್ಲಿಸಿದ್ದ ಎರಡು ಅರ್ಜಿಗಳ ಆದೇಶವನ್ನು ನ್ಯಾಯಾಲಯ ಅಕ್ಟೋಬರ್ 5ಕ್ಕೆ ಕಾಯ್ದಿರಿಸಿದೆ.
ಪ್ರಕರಣದ ವಿಚಾರಣೆಗೆ ಪ್ರದೋಷ್ ಅವರನ್ನು ಕೋರ್ಟ್‌ಗೆ ಕರೆತರುವಾಗ ಯಾರೊಂದಿಗೂ ಮಾತನಾಡಲು ಅವಕಾಶ ನೀಡಬಾರದು ಹಾಗೂ ಬೇರೆಯವರ ಭೇಟಿಗೂ ಅವಕಾಶ ಕಲ್ಪಿಸಬಾರದು ಎಂದು ಕೋರಿ ದರ್ಶನ್ ಪರ ವಕೀಲರು ಒಂದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಸಿಆರ್‌ಪಿಸಿ ಸೆಕ್ಷನ್ 267 ಹಾಗೂ ಬಿಎನ್‌ಎಸ್‌ಎಸ್ ಸೆಕ್ಷನ್ 302ರ ಅಡಿಯಲ್ಲಿ ಸಲ್ಲಿಸಲಾಗಿದೆ.
ಇನ್ನೊಂದೆಡೆ, ಎವಿಡೆನ್ಸ್ ಆ್ಯಕ್ಟ್‌ನ ಸೆಕ್ಷನ್ 137 ಮತ್ತು 138ರ ಅಡಿಯಲ್ಲಿ ಮತ್ತೊಂದು ಅರ್ಜಿ ಸಲ್ಲಿಸಲಾಗಿದೆ. ಮಾಫಿ ಸಾಕ್ಷಿ ವಿಚಾರದಲ್ಲಿ ಹಿಂದಿನ ದಿನ ಮರೆತುಹೋದ ಅಂಶಗಳನ್ನು ನಂತರದ ದಿನ ಸೇರಿಸಲು ಅವಕಾಶ ನೀಡಬಾರದು ಎಂದು ಈ ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಈ ಅರ್ಜಿಗೆ ಸಂಬಂಧಿಸಿದಂತೆ ಎಸ್‌ಪಿಪಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಲಿದ್ದಾರೆ. ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ದರ್ಶನ್ ಪರ ವಕೀಲರು ಸಲ್ಲಿಸಿರುವ ಎರಡೂ ಅರ್ಜಿಗಳ ಆದೇಶವನ್ನು ಅಕ್ಟೋಬರ್ 5ಕ್ಕೆ ಕಾಯ್ದಿರಿಸಿದೆ.
ಹೀಗಾಗಿ ಅಕ್ಟೋಬರ್ 5ರಂದು ನ್ಯಾಯಾಲಯದ ಆದೇಶದತ್ತ ಎಲ್ಲರ ಚಿತ್ತ ನೆಟ್ಟಿದ್ದು, ಪ್ರಕರಣದ ಮುಂದಿನ ಬೆಳವಣಿಗೆ ಕುತೂಹಲ ಮೂಡಿಸಿದೆ.



