ವಿದ್ಯಾರ್ಥಿ ಜೀವನಕ್ಕೆ ಅಂಕಗಳಿಗಿಂತ ಸಂಸ್ಕಾರ ಮುಖ್ಯ: ಆದಿತ್ಯಗೌಡ

ಕೆಂಭಾವಿ: ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದ ಘಟ್ಟವಾಗಿದ್ದು, ಕೇವಲ ಜ್ಞಾನಾರ್ಜನೆಗೆ ಸೀಮಿತವಾಗದೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಯುವ ಮುಖಂಡ ಆದಿತ್ಯಗೌಡ ಎಸ್. ಪೊಲೀಸ್ ಪಾಟೀಲ್ ಹೇಳಿದರು.
ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೊಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ, ಬಿಕಾಂ ಹಾಗೂ ಬಿಎಸ್ಸಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ, ವಿವಿಧ ಘಟಕಗಳ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೂರು ವರ್ಷಗಳ ಪದವಿ ಶಿಕ್ಷಣವು ಭವಿಷ್ಯದ ಬದುಕಿಗೆ ಭದ್ರ ಬುನಾದಿಯಾಗಲಿದೆ. ಕೇವಲ ಅಂಕಪಟ್ಟಿಯಿಂದ ಯಶಸ್ವಿ ಜೀವನ ರೂಪಿಸಿಕೊಳ್ಳಲು ಸಾಧ್ಯವಿಲ್ಲ. ಸಂಸ್ಕಾರ, ತಾಳ್ಮೆ, ಸೌಜನ್ಯ, ಸೌಹಾರ್ದತೆ ಹಾಗೂ ನಿರಂತರ ಪರಿಶ್ರಮ ಬೆಳೆಸಿಕೊಂಡರೆ ಉತ್ತಮ ಫಲಿತಾಂಶ ಪಡೆಯಬಹುದು. ‘ತಾಳಿದವನು ಬಾಳಿಯಾನು’ ಎಂಬಂತೆ ವಿದ್ಯಾರ್ಥಿಗಳು ಪರಸ್ಪರ ಪ್ರೀತಿ–ವಿಶ್ವಾಸದಿಂದ ನಡೆದುಕೊಂಡು ಭವ್ಯ ಭಾರತದ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ನಾಗಪ್ಪ ಚಾವಲ್ಕರ್ ವಹಿಸಿದ್ದರು. ಸಾಂಸ್ಕೃತಿಕ ಘಟಕದ ಸಂಚಾಲಕಿ ಹಾಗೂ ಸಹ ಪ್ರಾಧ್ಯಾಪಕಿ ನಸ್ರೀನ್ ತಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಬಗಲಿ, ಸಿಡಿಸಿ ಸದಸ್ಯ ಸಾಹೇಬ್ ಲಾಲ್ ಆಂದೇಲಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವೀರೇಶ ಎಸ್. ಹಾಗೂ ಉಪಾಧ್ಯಕ್ಷ ಹರ್ಷದ್ ಮಾತನಾಡಿದರು.
ಸನ್ಮಾನ, ಸ್ವಾಗತ: ಸೇವೆಯಿಂದ ವಯೋನಿವೃತ್ತಿ ಹೊಂದಿದ ಕಾಲೇಜಿನ ಪ್ರಥಮ ದರ್ಜೆ ಸಹಾಯಕ ಸಂಗಮೇಶ ಪಟ್ಟಣಕರ್ ಹಾಗೂ ವರ್ಗಾವಣೆಗೊಂಡ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಸಿದ್ದಲಿಂಗ ರಾಠೋಡ್ ಅವರನ್ನು ಸನ್ಮಾನಿಸಲಾಯಿತು. ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಗುಲಾಬಿ ಹೂ ಹಾಗೂ ಲೇಖನಿ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಶರಣಬಸವ ವಿ. ಡಿಗ್ಗಾವಿ, ರಮೇಶ ಕೊಡಗಾನೂರು, ಶಿವಪ್ಪ ಜಿ. ಕಂಬಾರ, ಶರಣಪ್ಪ ಯಾಳಗಿ, ಡಾ. ಪೂಜಾ ಹೊನ್ನುಟಗಿ, ಸುಮಾ ಎಚ್., ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರೇವಣಸಿದ್ದಯ್ಯ ಮಠ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿದ್ಯಾರ್ಥಿನಿ ಸುಷ್ಮಾ ಅವರ ಭರತನಾಟ್ಯ ಪ್ರದರ್ಶನ ಗಮನ ಸೆಳೆಯಿತು. ಉಪನ್ಯಾಸಕ ಮಲ್ಲಿಕಾರ್ಜುನ ಮರಡ್ಡಿ ಸ್ವಾಗತಿಸಿದರು. ಡಾ. ಯಂಕನಗೌಡ ಪಾಟೀಲ್ ನಿರೂಪಿಸಿದರು. ಮಲ್ಲಣ್ಣ ಬಿಳೆಬಾವಿ ವಂದಿಸಿದರು.



