
100ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶ: ಉದ್ಯೋಗ ಮೇಳಕ್ಕೆ ಉತ್ತಮ ಸ್ಪಂದನೆ:ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳ 300ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದ ಉದ್ಯೋಗ ಮೇಳದಲ್ಲಿ 100ಕ್ಕೂ ಅಧಿಕ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಆಕ್ಸಿಸ್, ಐಸಿಐಸಿಐ, ಎಚ್ಡಿಎಫ್ಸಿ ಸೇರಿದಂತೆ ವಿವಿಧ ಬ್ಯಾಂಕುಗಳ ಹುದ್ದೆಗಳಿಗೆ 14 ಅಭ್ಯರ್ಥಿಗಳು, ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು, ಉಪನ್ಯಾಸಕರು, ವಾರ್ಡನ್ ಹಾಗೂ ಕಚೇರಿ ಸಿಬ್ಬಂದಿ ಹುದ್ದೆಗಳಿಗೆ 30 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇನ್ನು ಟೊಯೋಟಾ, ಟಾಟಾ ಎಲೆಕ್ಟ್ರಾನಿಕ್ಸ್, ಪಕ್ಸ್ಕಾನ್ ಸೇರಿದಂತೆ ವಿವಿಧ ಬಹುರಾಷ್ಟ್ರೀಯ ಕಂಪನಿಗಳಲ್ಲಿ 60ಕ್ಕೂ ಹೆಚ್ಚು ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಆಯ್ಕೆಯಾಗುವ ಮೂಲಕ ಉದ್ಯೋಗ ಮೇಳ ಯಶಸ್ವಿಯಾಗಿದೆ. ಈ ಮೂಲಕ ಹೈದರಾಬಾದ್ ಕರ್ನಾಟಕ ಭಾಗದ ನಿರುದ್ಯೋಗಿ ಯುವಜನರಿಗೆ ಉದ್ಯೋಗದ ಹೊಸ ಭರವಸೆ ಮೂಡಿಸುವ ಮಹತ್ವದ ಪ್ರಯತ್ನ ನಡೆದಿದೆ. ಉದ್ಯೋಗದಲ್ಲಿ ಆಸಕ್ತಿ ಹೊಂದಿರುವ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಸೇರಿದಂತೆ ಹೈದರಾಬಾದ್ ಕರ್ನಾಟಕ ಭಾಗದ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಜನಾಭಿಪ್ರಾಯ ಡಿಜಿಟಲ್ ಮಾಧ್ಯಮ, ಜಗತ್ ವೃತ್ತದ ಹತ್ತಿರ, ಕಲಬುರಗಿ ಕಚೇರಿಯನ್ನು ಸಂಪರ್ಕಿಸಬಹುದು.
ಕಲಬುರಗಿ: ಉದ್ಯೋಗಕ್ಕಾಗಿ ಅಲೆದಾಡುತ್ತಿರುವ ಯುವಜನರಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸುವ ಮೂಲಕ ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ ಕೆಲಸವಾಗಬೇಕು. ಉದ್ಯೋಗ ಮೇಳಗಳು ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರ ನಡುವಿನ ಸಂಪರ್ಕ ಸೇತುವೆಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅನನ್ಯ ಪದವಿ ಮಹಾವಿದ್ಯಾಲಯದ ಸಂಸ್ಥಾಪಕ ಶರಣು ಬಿ. ಹೊನ್ನಗಜ್ಜಿ (ಪೂಜಾರಿ) ಹೇಳಿದರು.
ನಗರದ ಹಳೆಯ ಜೇವರ್ಗಿ ರಸ್ತೆಯಲ್ಲಿರುವ ಅನನ್ಯ ಪದವಿ ಮಹಾವಿದ್ಯಾಲಯದಲ್ಲಿ ಭಾನುವಾರ ಜನಾಭಿಪ್ರಾಯ ಡಿಜಿಟಲ್ ಮಾಧ್ಯಮ ಹಾಗೂ ಕರಾವಳಿ ಟೀಚರ್ಸ್ ಹೆಲ್ಪ್ಲೈನ್ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿದ್ದರೂ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಸೀಮಿತವಾಗಿವೆ. ಇದರಿಂದಾಗಿ ಯುವಕರು ಉದ್ಯೋಗ ಅರಸಿ ಬೆಂಗಳೂರು ಸೇರಿದಂತೆ ದೂರದ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ಇದೆ. ಯುವಜನರು ಪದವಿ ಶಿಕ್ಷಣದ ಜತೆಗೆ ಸಂವಹನ ಕಲೆ, ತಾಂತ್ರಿಕ ಜ್ಞಾನ ಹಾಗೂ ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಲಭ್ಯವಿರುವ ಉದ್ಯೋಗ ಮೇಳಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೈಗಾರಿಕೆಗಳ ಕೊರತೆಯಿಂದ ನಿರುದ್ಯೋಗ ಹೆಚ್ಚಳ: ರಾಜೇಂದ್ರ ರಾಜವಾಳ
ಕಲ್ಯಾಣ ಕರ್ನಾಟಕದಲ್ಲಿ ಕೈಗಾರಿಕೆಗಳು, ಕಾರ್ಖಾನೆಗಳು ಹಾಗೂ ಖಾಸಗಿ ಉದ್ಯಮಗಳ ಸ್ಥಾಪನೆಗೆ ಆದ್ಯತೆ ನೀಡದಿರುವುದು ನಿರುದ್ಯೋಗ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣವಾಗಿದೆ ಎಂದು ಜನಾಭಿಪ್ರಾಯ ಡಿಜಿಟಲ್ ಮಾಧ್ಯಮದ ಸಂಪಾದಕ ರಾಜೇಂದ್ರ ರಾಜವಾಳ ಹೇಳಿದರು.
ಯುವಕರು ಉದ್ಯೋಗಕ್ಕಾಗಿ ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಬದಲು ಸ್ಥಳೀಯವಾಗಿಯೇ ಉದ್ಯೋಗ ಪಡೆಯುವ ವಾತಾವರಣ ನಿರ್ಮಾಣವಾಗಬೇಕು. ಕಂಪನಿಗಳು ಹಾಗೂ ಉದ್ಯೋಗದಾತ ಸಂಸ್ಥೆಗಳು ಈ ಭಾಗಕ್ಕೆ ಆಗಮಿಸಿ ಯುವಕರ ವಿದ್ಯಾರ್ಹತೆ ಮತ್ತು ಕೌಶಲಕ್ಕೆ ಅನುಗುಣವಾಗಿ ಉದ್ಯೋಗ ಕಲ್ಪಿಸಬೇಕು. ಸರ್ಕಾರ, ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಾಮಾಜಿಕ ಸಂಘಟನೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಉದ್ಯೋಗ ಮೇಳ ಆಯೋಜನೆ ಜನಾಭಿಪ್ರಾಯ ಮಾಧ್ಯಮದ ಸಾಮಾಜಿಕ ಬದ್ಧತೆಯ ಭಾಗವಾಗಿದೆ ಎಂದು ತಿಳಿಸಿದರು.

ಉತ್ತರ ಕರ್ನಾಟಕದ ಯುವಕರಿಗೆ ಉದ್ಯೋಗ ಮಾಹಿತಿ ಕೇಂದ್ರ ನೆರವು: ಪಾಂಡುರಂಗ ರಾವ್
ಕರಾವಳಿ ಟೀಚರ್ಸ್ ಹೆಲ್ಪ್ಲೈನ್ (ಕೆಟಿಎಚ್ಎಲ್) ಸಂಸ್ಥೆಯ ನಿರ್ದೇಶಕ ಪಾಂಡುರಂಗ ರಾವ್ ಮಾತನಾಡಿ, ಉತ್ತರ ಕರ್ನಾಟಕದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಕಲಬುರಗಿಯಲ್ಲಿ ನೂತನ ಉದ್ಯೋಗ ಮಾಹಿತಿ ಕೇಂದ್ರ ಆರಂಭಿಸಲಾಗಿದೆ ಎಂದರು.
ಶಾಲಾ-ಕಾಲೇಜುಗಳ ಶಿಕ್ಷಕ ಹಾಗೂ ಬೋಧಕೇತರ ಹುದ್ದೆಗಳ ಜತೆಗೆ ಆಕ್ಸಿಸ್, ಐಸಿಐಸಿಐ, ಕೋಟಕ್ ಮಹೀಂದ್ರಾ, ಎಚ್ಡಿಎಫ್ಸಿ ಸೇರಿದಂತೆ ವಿವಿಧ ಬ್ಯಾಂಕುಗಳು ಹಾಗೂ ಬೆಂಗಳೂರಿನ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳಲ್ಲಿನ ಉದ್ಯೋಗಾವಕಾಶಗಳ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುವುದು. ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳು ಕೇಂದ್ರದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಹೇಳಿದರು.
ಉದ್ಯೋಗ ಮೇಳದಲ್ಲಿ ವಿವಿಧ ಶಾಲಾ-ಕಾಲೇಜುಗಳು, ಬ್ಯಾಂಕಿಂಗ್ ಸಂಸ್ಥೆಗಳು ಹಾಗೂ ಖಾಸಗಿ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ನೂರಾರು ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡು ಉದ್ಯೋಗಾವಕಾಶಗಳ ಕುರಿತು ಮಾಹಿತಿ ಪಡೆದರು.
ಕಾಲೇಜಿನ ಉಪನ್ಯಾಸಕರಾದ ರಾಹುಲ್ ಶೇರಿಕರ್, ಶರಣ್ ಬಡದಾಳ, ಜಗನ್ನಾಥ ಫುಲ್ಲಾ, ಪ್ರವೀಣಕುಮಾರ ನವಲೆ ಹಾಗೂ ಅನಿಲ ನೈಕೋಡಿ ಉಪಸ್ಥಿತರಿದ್ದರು.
ಸಂಪರ್ಕ: ಕರಾವಳಿ ಟೀಚರ್ಸ್ ಹೆಲ್ಪ್ಲೈನ್, ಕಲಬುರಗಿ. ಮೊಬೈಲ್: 9743218480 / 9743328480.


