ಕಲಬುರಗಿಜಿಲ್ಲೆ ಸುದ್ದಿ

ಡಾ. ಬಸವರಾಜ ಕೊನೆಕ್ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ

ಸಿದ್ಧಲಿಂಗೇಶ್ವರ ಪ್ರಕಾಶನದ ಪ್ರಕಾಶಕನಿಗೆ ಕಸಾಪದಿಂದ ಗೌರವದ ಆಹ್ವಾನ; ಮೈಸೂರು ಪೇಟ, ಶಾಲು ಹೊದಿಸಿ ಸನ್ಮಾನ

ಕಲಬುರಗಿ: ನಗರದ ಕನ್ನಡ ಭವನದ ಆವರಣದಲ್ಲಿ ನ.15ರಂದು ನಡೆಯಲಿರುವ ತಾಲ್ಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಿದ್ಧಲಿಂಗೇಶ್ವರ ಪ್ರಕಾಶನದ ಪ್ರಕಾಶಕ ಹಾಗೂ ಪುಸ್ತಕೋದ್ಯಮಿ ಡಾ. ಬಸವರಾಜ ಕೊನೆಕ್ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅವರ ನಿವಾಸದಲ್ಲಿ ಅಧಿಕೃತ ಆಹ್ವಾನ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಲಾಯಿತು.

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಭಾಷೆ ಮತ್ತು ಪ್ರಕಾಶನ ಲೋಕಕ್ಕೆ ಡಾ. ಬಸವರಾಜ ಕೊನೆಕ್ ಅವರ ಕೊಡುಗೆ ಅಪಾರವಾಗಿದೆ. ಸಾಹಿತ್ಯದಲ್ಲಿನ ಜ್ಞಾನಸಂಪತ್ತು ಎಲ್ಲರಿಗೂ ತಲುಪಬೇಕಾದರೆ ಪುಸ್ತಕಗಳ ಪ್ರಕಟಣೆ ಅತ್ಯಂತ ಮಹತ್ವದ್ದು. ಪುಸ್ತಕಗಳ ಮೂಲಕ ಜನರಲ್ಲಿ ಓದುವ ಹವ್ಯಾಸ ಬೆಳೆಸಲು ಸಾಧ್ಯ. ಈ ನಿಟ್ಟಿನಲ್ಲಿ ಸಾವಿರಾರು ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಹೊಸ ಬರಹಗಾರರ ಸಾಹಿತ್ಯ ಕೃತಿಗಳಿಗೆ ಬೆಳಕು ಚೆಲ್ಲಿದ್ದಾರೆ. ಸಾಹಿತ್ಯ ಸಮ್ಮೇಳನಗಳು ಸಮಾಜದಲ್ಲಿ ಸಾಹಿತ್ಯಿಕ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುತ್ತವೆ ಎಂದರು.

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಡಾ. ಬಸವರಾಜ ಕೊನೆಕ್, ನಾಡಿನ ನೆಲ, ಜಲ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಮಕ್ಕಳಿಗೆ ಮಾತೃಭಾಷೆಯ ಕಲಿಕೆ ಅತ್ಯಂತ ಮುಖ್ಯ. ಕನ್ನಡದ ಅಭಿವೃದ್ಧಿಗೆ ಓದುವ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಹೇಳಿದರು.

1974ರಲ್ಲಿ ಸಿದ್ಧಲಿಂಗೇಶ್ವರ ಪುಸ್ತಕ ಮಳಿಗೆ ಆರಂಭಿಸಿ, 2002ರಲ್ಲಿ ಪ್ರಕಾಶನ ಕ್ಷೇತ್ರಕ್ಕೆ ಪ್ರವೇಶಿಸಿದೆವು. ಈ ಭಾಗದ ಯುವ ಬರಹಗಾರರನ್ನು ಪ್ರೋತ್ಸಾಹಿಸಿ ಅವರ ಸಾಹಿತ್ಯ ಕೃತಿಗಳನ್ನು ಪ್ರಕಟಿಸಲಾಗಿದೆ. ಸಾಹಿತ್ಯದ ಬೆಳವಣಿಗೆಯಲ್ಲಿ ಪ್ರಕಾಶಕರ ಪಾತ್ರ ಮಹತ್ವದ್ದಾಗಿದೆ. ನಾಡು-ನುಡಿಗಾಗಿ ಸಲ್ಲಿಸುತ್ತಿರುವ ಸೇವೆ ತೃಪ್ತಿ ತಂದಿದೆ. ಹೊಸ ಆಲೋಚನೆ ಹಾಗೂ ವಿಭಿನ್ನ ಪ್ರಯೋಗಗಳ ಮೂಲಕ ಪರಿಷತ್ತು ಜಿಲ್ಲೆಯಲ್ಲಿ ಹೊಸ ದಿಕ್ಕಿನತ್ತ ಸಾಗುತ್ತಿದೆ. ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ. ಪುಸ್ತಕ ಪ್ರಕಟಣೆಯಲ್ಲಿ ತೊಡಗಿಸಿಕೊಂಡಿರುವ ನನ್ನನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದರು.

ತಾಲ್ಲೂಕು ಕಸಾಪ ಅಧ್ಯಕ್ಷೆ ಶಿವಲೀಲಾ ಕಲಗುರ್ಕಿ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಪ್ರಮುಖರಾದ ಮುಡುಬಿ ಗುಂಡೇರಾವ್, ಡಾ. ಶ್ರೀಶೈಲ್ ನಾಗರಾಳ, ಡಾ. ಸಿ.ಸಿ. ನಿಂಗಣ್ಣ, ಡಾ. ಗವಿಸಿದ್ದ ಪಾಟೀಲ, ಡಾ. ಜಯದೇವಿ ಗಾಯಕ್ವಾಡ್, ಅಮೃತಪ್ಪ ಅಣೂರು, ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ರಾಜೇಂದ್ರ ಮಾಡಬೂಳ, ಪರಮಾನಂದ ಸರಸಂಬಿ, ಮಹಾಲಿಂಗಯ್ಯ ಸ್ವಾಮಿ, ಪ್ರಭಾವ ಪಟಣಕರ್, ಸಂಗಣ್ಣ ಚೋರಗಸ್ತಿ, ಪತ್ರಕರ್ತರಾದ ಪ್ರಭಾಕರ ಜೋಶಿ, ಶೇಷಮೂರ್ತಿ ಅವಧಾನಿ, ಮನೋಜಕುಮಾರ ಗುಡ್ಡಿ, ಡಾ. ಶಿವರಂಜನ ಸತ್ಯಂಪೇಟೆ, ಲಲಿತಾ ಪಾಟೀಲ, ಮಹಾನಂದಾ ಹುಲಿ, ಭುವನೇಶ್ವರಿ ಹಳ್ಳಿಖೇಡ, ಶಾರದಾ, ಸುನೀತಾ, ರವಿ ಶಹಾಪೂರಕರ್, ಹಣಮಂತ ಪೆಂಚನಪಳ್ಳಿ, ಅನೀಲಕುಮಾರ ಪಾಟೀಲ, ಸಿದ್ಧಲಿಂಗ ಬಾಳಿ, ಈರಣ್ಣ ಸೋನಾರ, ರಾಜಶೇಖರ ಚಿಂಚೋಳಿ, ವಿನೋದಕುಮಾರ ಜೇನವೇರಿ, ಗಣೇಶ ಚಿನ್ನಾಕಾರ, ರೇಣುಕಾ ಎನ್. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button