ರಾಜ್ಯ

ಕಲಬುರಗಿ ಜಿಲ್ಲೆಯ ಎರಡು ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟ ಅಸ್ತು

₹105.20 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ: ಪ್ರಿಯಾಂಕ್‌ ಖರ್ಗೆ

ಬೆಂಗಳೂರು, ಸೆ. 3: ಕಲಬುರಗಿ ಜಿಲ್ಲೆಯ ನೀರಾವರಿ ಹಾಗೂ ಜಲಸಂರಕ್ಷಣಾ ಮೂಲಸೌಕರ್ಯವನ್ನು ಬಲಪಡಿಸುವ ಉದ್ದೇಶದ ಎರಡು ಮಹತ್ವದ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಟ್ಟು ₹105.20 ಕೋಟಿ ಮೊತ್ತದ ಕಾಮಗಾರಿಗಳಿಗೆ ಒಪ್ಪಿಗೆ ದೊರೆತಿದೆ.
12 ಕೆರೆಗಳಿಗೆ ನೀರು
ಆಳಂದ ತಾಲೂಕಿನ 12 ಕೆರೆಗಳಿಗೆ ಬೋರಿ ನದಿಯಿಂದ ನೀರು ಎತ್ತಿ ತುಂಬಿಸುವ ₹56 ಕೋಟಿ ಮೊತ್ತದ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.


ಯೋಜನೆಯಡಿ 28.94 ಎಂಸಿಎಫ್‌ಟಿ ನೀರನ್ನು 12 ಕೆರೆಗಳಿಗೆ ಹರಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಬೋರಿ ನದಿಯಿಂದ ನೀರೆತ್ತುವ ಪಂಪಿಂಗ್ ವ್ಯವಸ್ಥೆ, ಪಂಪ್‌ಹೌಸ್‌, ವಿದ್ಯುತ್‌ ಉಪಕೇಂದ್ರ, ಪೈಪ್‌ಲೈನ್‌ ಹಾಗೂ ವಿತರಣಾ ಜಾಲ ನಿರ್ಮಿಸಲಾಗುವುದು.


ಈ ಯೋಜನೆಗೆ 2023–24ನೇ ಸಾಲಿನಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. ಇದೀಗ ಯೋಜನೆಯನ್ನು ಮುಂದುವರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.


ಕೆರೆಗಳಿಗೆ ನೀರು ಲಭ್ಯವಾಗುವುದರಿಂದ ಜಲಮೂಲಗಳ ಸಮರ್ಪಕ ಬಳಕೆಯೊಂದಿಗೆ ಆಳಂದ ತಾಲೂಕಿನ ನೀರಾವರಿ ಸೌಲಭ್ಯ ವಿಸ್ತರಣೆಗೆ ನೆರವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.


ಸಣ್ಣ ನೀರಾವರಿ ಕಾಮಗಾರಿಗಳಿಗೆ ₹49.20 ಕೋಟಿ
ಕಲಬುರಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಣ್ಣ ನೀರಾವರಿ ಹಾಗೂ ಜಲಸಂರಕ್ಷಣಾ ಕಾಮಗಾರಿಗಳನ್ನು ಕೈಗೊಳ್ಳಲು ₹49.20 ಕೋಟಿ ಮೊತ್ತದ ಮತ್ತೊಂದು ಯೋಜನೆಗೂ ಸಚಿವ ಸಂಪುಟ ಅನುಮೋದನೆ ನೀಡಿದೆ.


ಈ ಯೋಜನೆಯಡಿ ಕೆರೆ, ನಾಲಾ ಹಾಗೂ ಇತರ ಜಲಮೂಲಗಳ ಅಭಿವೃದ್ಧಿ, ಸರಣಿ ಚೆಕ್‌ಡ್ಯಾಂಗಳ ನಿರ್ಮಾಣ, ನಾಲಾ ಆಳಗೊಳಿಸುವಿಕೆ ಮತ್ತು ಅಗಲೀಕರಣ ಸೇರಿದಂತೆ ಜಲಸಂಗ್ರಹ ಹಾಗೂ ಅಂತರ್ಜಲ ಮರುಪೂರಣಕ್ಕೆ ಪೂರಕವಾದ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು.


‘ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದೆ. ನೀರಾವರಿ ಮತ್ತು ಜಲಸಂರಕ್ಷಣೆಗೆ ಸಂಬಂಧಿಸಿದ ಎರಡು ಪ್ರಮುಖ ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದು ರೈತರು ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಿದೆ. ನೀರಿನ ಲಭ್ಯತೆ ಹೆಚ್ಚಿಸುವ ಮೂಲಕ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಲು ಸರ್ಕಾರ ಬದ್ಧವಾಗಿದೆ’ ಎಂದು ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.


ಈ ಎರಡು ಯೋಜನೆಗಳು ಜಿಲ್ಲೆಯ ನೀರಾವರಿ ಹಾಗೂ ಜಲಸಂರಕ್ಷಣಾ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲಿವೆ ಎಂದು ಅವರು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button