ನೀಟ್ ಅವ್ಯವಹಾರ ಖಂಡಿಸಿ ಎಐಡಿಎಸ್ಒ ಪ್ರತಿಭಟನೆ | ಎನ್ಟಿಎ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಕಲಬುರಗಿ: ನೀಟ್ (NEET) ಪರೀಕ್ಷೆಯಲ್ಲಿ ನಡೆದಿರುವ ಅವ್ಯವಹಾರಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಎನ್ಟಿಎ (NTA) ನಿರ್ಲಕ್ಷ್ಯವನ್ನು ಖಂಡಿಸಿ AIDSO ಕಲಬುರಗಿ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಐಡಿಎಸ್ಒ ಜಿಲ್ಲಾ ಕೌನ್ಸಿಲ್ ಉಪಾಧ್ಯಕ್ಷ ಗೋವಿಂದ ಯಳವಾರ್, ವೈದ್ಯಕೀಯ ಶಿಕ್ಷಣ ಪಡೆಯುವ ಕನಸಿನಿಂದ ಸಾವಿರಾರು ವಿದ್ಯಾರ್ಥಿಗಳು ಲಕ್ಷಾಂತರ ರೂಪಾಯಿ ವೆಚ್ಚಮಾಡಿ ವರ್ಷಗಳ ಕಾಲ ಶ್ರಮಪಟ್ಟು ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಾರೆ. ಆದರೆ ಕಳೆದ ಮೂರು ವರ್ಷಗಳಲ್ಲಿ ಎರಡು ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ಹೊಡೆತವಾಗಿದೆ ಎಂದು ಆರೋಪಿಸಿದರು.
ಎನ್ಟಿಎ ಸಂಸ್ಥೆ ಕೋಚಿಂಗ್ ಮಾಫಿಯಾಗಳ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಹಣಕ್ಕಾಗಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಕನಸುಗಳಿಗೆ ಮಣ್ಣೆರಚುತ್ತಿದೆ. ಸರ್ಕಾರ ಕೂಡಲೇ ಎನ್ಟಿಎ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಎಐಡಿಎಸ್ಒ ಜಿಲ್ಲಾ ಕೌನ್ಸಿಲ್ ಉಪಾಧ್ಯಕ್ಷೆ ಪ್ರೀತಿ ದೊಡ್ಡಮನಿ ಮಾತನಾಡಿ, ವೈದ್ಯಕೀಯ ಸೀಟಿಗಾಗಿ ವಿದ್ಯಾರ್ಥಿಗಳು ಹಗಲು-ರಾತ್ರಿ ಶ್ರಮಿಸುತ್ತಾರೆ. ಆದರೆ ಶಿಕ್ಷಣ ವ್ಯವಸ್ಥೆಯನ್ನು ಹಣದ ಆಧಾರದಲ್ಲಿ ನಡೆಸುತ್ತಿರುವುದು ಅತ್ಯಂತ ಖಂಡನೀಯ. ಕೆಲವರ ಲಾಭಕ್ಕಾಗಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಹಾಳು ಮಾಡಲಾಗುತ್ತಿದೆ ಎಂದು ದೂರಿದರು.
ಭ್ರಷ್ಟಾಚಾರ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿಗಳ ಭವಿಷ್ಯ ಬಲಿಯಾಗುತ್ತಿದೆ. ಶಿಕ್ಷಣವನ್ನು ಮಾರುಕಟ್ಟೆಯನ್ನಾಗಿ ಮಾಡಿರುವ ಪರಿಣಾಮ ಇಂತಹ ಸಮಸ್ಯೆಗಳು ಮರುಕಳಿಸುತ್ತಿವೆ ಎಂದು ಅವರು ಹೇಳಿದರು.
ಸರ್ಕಾರ ಕೂಡಲೇ ಎನ್ಟಿಎ ಸಂಸ್ಥೆಯನ್ನು ವಜಾಗೊಳಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲವಾದರೆ ವಿದ್ಯಾರ್ಥಿಗಳು ಬೃಹತ್ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ದೇವದುರ್ಗ, ಜಿಲ್ಲಾ ಖಜಾಂಚಿ ಸ್ಪೂರ್ತಿ ಗುರಜಾಲಕರ್, ಜಿಲ್ಲಾ ಸಮಿತಿ ಸದಸ್ಯ ಯುವರಾಜ್ ರಾಠೋಡ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.




