ಕೆಂಭಾವಿಯಲ್ಲಿ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ

ಕೆಂಭಾವಿ:ಪಟ್ಟಣದ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮ ಹಾಗೂ ಚಿಂತನಾ ಸಭೆಯಲ್ಲಿ ನೂರಾರು ಕಟ್ಟಡ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸಲಾಯಿತು.
ಕೆಂಭಾವಿ ಹೋಬಳಿ ಕಾರ್ಮಿಕ ಘಟಕದ ಅಧ್ಯಕ್ಷ ಗುರುರಾಜ ಎಸ್. ಅಂಗಡಿ ಮಾತನಾಡಿ, “ಕಾರ್ಮಿಕರ ಹಕ್ಕಾದ ಈ ಸ್ಮಾರ್ಟ್ ಕಾರ್ಡ್ಗಳನ್ನು ನೀಡುವಂತೆ ನಾವು ತಾಲ್ಲೂಕು ಮತ್ತು ಜಿಲ್ಲಾ ಕಾರ್ಮಿಕ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿಸುತ್ತಿದ್ದರು.
ವರ್ಷಗಟ್ಟಲೆ ನೆನೆಗುದಿಗೆ ಬಿದ್ದಿದ್ದ ಈ ಕೆಲಸಕ್ಕೆ ನಾವು ಜಿಲ್ಲಾ ಮಟ್ಟದಲ್ಲಿ ಬೃಹತ್ ಹೋರಾಟದ ಎಚ್ಚರಿಕೆ ನೀಡಿದ ಬಳಿಕವಷ್ಟೇ ಇಲಾಖೆ ಎಚ್ಚೆತ್ತುಕೊಂಡು ಕಾರ್ಡ್ಗಳನ್ನು ವಿತರಿಸಿದೆ. ಇದು ಕಾರ್ಮಿಕರ ಒಗ್ಗಟ್ಟಿನ ಜಯ,” ಎಂದು ಹೇಳಿದರು.
ಕಟ್ಟಡ ಕಾರ್ಮಿಕರ ಸ್ಮಾರ್ಟ್ ಕಾರ್ಡ್ ವಿತರಣೆ ಹಲವು ವರ್ಷಗಳಿಂದ ಬಾಕಿ ಉಳಿದಿದ್ದು, ಅದಕ್ಕಾಗಿ ನಮ್ಮ ಕರ್ನಾಟಕ ಸೇನೆ ಕೆಂಭಾವಿ ಹೋಬಳಿ ಕಾರ್ಮಿಕ ಘಟಕವು ನಡೆಸಿದ ನಿರಂತರ ಹೋರಾಟಕ್ಕೆ ಇದೀಗ ಫಲ ಸಿಕ್ಕಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಕರ್ನಾಟಕ ಸೇನೆ ಕಟ್ಟಡ ಕಾರ್ಮಿಕ ಘಟಕದ ರಾಜ್ಯ ಉಪಾಧ್ಯಕ್ಷ ಗುರು ದೊಡ್ಮನಿ ವಹಿಸಿ, ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕೆಂಭಾವಿ ಹೋಬಳಿ ಘಟಕದ ಅಧ್ಯಕ್ಷ ಶರಣು ಎಸ್. ದೇವರಮನಿ, ಮಲ್ಲಾ ಗ್ರಾಮ ಘಟಕದ ಅಧ್ಯಕ್ಷ ರಫೀಕ ಮುಜವಾರ, ತಿಪ್ಪನಟಿಗಿ ಗ್ರಾಮ ಘಟಕದ ಅಧ್ಯಕ್ಷ ಹನುಮಂತ, ಮುರ್ತುಜಾ ಸುರಪುರ, ಸಿದ್ದು ಉಪ್ಪಾರ್, ಪರಶುರಾಮ್ ಕಡಕೋಳ, ದೇವಪ್ಪ ಯಮನೂರ, ಮಾಸುಮಲಿ, ನಿಂಗಣ್ಣ ಟೈಲರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


