“ಕಲಬುರಗಿಯ ಆನ್ಲೈನ್ ಎಂಪಿ” ಎಂದು ರಾಧಾಕೃಷ್ಣ ದೊಡ್ಡಮನಿ ವಿರುದ್ಧ ಡಾ. ಉಮೇಶ್ ಜಾಧವ್ ಟೀಕೆ

ಕಲಬುರಗಿ: ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರು ಕಳೆದ ಎರಡುವರೆ ವರ್ಷಗಳಲ್ಲಿ ಒಂದೇ ಒಂದು ಸಭೆಯನ್ನು ಸಮರ್ಪಕವಾಗಿ ನಡೆಸದೆ, ಇತ್ತೀಚೆಗೆ ದಿಶಾ ಸಭೆಯನ್ನು ಆನ್ಲೈನ್ ಮೂಲಕ ನಡೆಸುವ ಮೂಲಕ “ಕಲಬುರಗಿಯ ಆನ್ಲೈನ್ ಎಂಪಿ” ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ ಎಂದು ಮಾಜಿ ಸಂಸದ ಡಾ. ಉಮೇಶ್ ಜಾಧವ್ ಲೇವಡಿ ಮಾಡಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆಗಾಗಿ ಫೆಬ್ರವರಿ 28ರಂದು ತರಾತುರಿಯಲ್ಲಿ ದಿಶಾ ಸಭೆ ಕರೆಯಲಾಗಿತ್ತು. ಆದರೆ ಸ್ವತಃ ಲೋಕಸಭಾ ಸದಸ್ಯರು ಸಭೆಗೆ ಗೈರುಹಾಜರಾಗಿ ವೀಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದಾರೆ ಎಂದು ಆರೋಪಿಸಿದರು. ದಿಶಾ ಸಭೆಯನ್ನು ಆನ್ಲೈನ್ ಮೂಲಕ ನಡೆಸಿರುವುದು ಭಾರತದ ಇತಿಹಾಸದಲ್ಲೇ ಪ್ರಥಮ ಎಂದು ಟೀಕಿಸಿದರು.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿ ಕ್ಷೇತ್ರದ ಅಭಿವೃದ್ಧಿ ಸಾಧಿಸಬೇಕಾದ ಎಂಪಿ ಮತದಾರರಿಗೆ ಲಭ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ತಾನು ಎಂಪಿಯಾಗಿದ್ದಾಗ ಸುಳ್ಳು ಹೇಳಿ ಆಯ್ಕೆಯಾಗಿದ್ದಾರೆ ಎಂದು ಆರೋಪಿಸಿದವರು, ಈಗ ಅವರ ಸ್ಥಿತಿಯನ್ನು ಹುಡುಕಬೇಕಾಗಿದೆ ಎಂದು ವ್ಯಂಗ್ಯವಾಡಿದರು.
ಎಂಪಿ, ಎಂಎಲ್ಎ ಹಾಗೂ ಸಚಿವ ಸ್ಥಾನಗಳು ಖರ್ಗೆ ಮನೆತನದಲ್ಲೇ ಇರಬೇಕು ಎಂಬ ಸ್ವಾರ್ಥ ರಾಜಕಾರಣದಿಂದ ಕಲಬುರಗಿಯ ಪರಿಸ್ಥಿತಿ ಹದಗೆಟ್ಟಿದೆ ಎಂದು ಅವರು ಕಟುವಾಗಿ ಆರೋಪಿಸಿದರು. ಕಲಬುರಗಿ ವಿಮಾನ ನಿಲ್ದಾಣ ಬಂದ್ ಆದರೂ ಲೋಕಸಭಾ ಸದಸ್ಯರು ಕೇಂದ್ರ ಸರ್ಕಾರಕ್ಕೆ ಕೇವಲ ಒಂದು ಪತ್ರ ಬರೆದು ಮೌನವಾಗಿರುವುದು ವಿಷಾದಕರ ಸಂಗತಿ ಎಂದು ಹೇಳಿದರು. ಕೊರೋನಾ ಅವಧಿಯಲ್ಲಿ ವಿಮಾನ ಹಾರಾಟ ನಡೆದಿದ್ದರೂ, ಈಗ ಶ್ರೀಮಂತರ ಖಾಸಗಿ ವಿಮಾನಗಳು ಮಾತ್ರ ಇಳಿಯುವ ನಿಲ್ದಾಣವಾಗಿ ಮಾರ್ಪಟ್ಟಿದೆ ಎಂದು ದೂರಿದರು.
ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಬೇಕಾದ ಬ್ಯಾಂಕರ್ಸ್ ಸಭೆಯನ್ನೂ ನಡೆಸದೆ ಅಭಿವೃದ್ಧಿ ಯೋಜನೆಗಳ ಬಗ್ಗೆ ನಿರಾಸಕ್ತಿ ತೋರಿದ್ದಾರೆ. ಇದರಿಂದ ಪ್ರಸ್ತುತ ಲೋಕಸಭಾ ಸದಸ್ಯರ ವಿರುದ್ಧ ಜನರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ ಎಂದು ಡಾ. ಉಮೇಶ್ ಜಾಧವ್ ಹೇಳಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಕಳೆದ ಎರಡುವರೆ ವರ್ಷಗಳಲ್ಲಿ ಸುಮಾರು ₹38,859 ಕೋಟಿ ರೂಪಾಯಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದು, ಇದರಿಂದ ಅಂಬೇಡ್ಕರ್, ಅಡಿಜಾಂಬವ, ವಾಲ್ಮೀಕಿ, ತಾಂಡಾ ಹಾಗೂ ಲಿಡ್ಕರ್ ಅಭಿವೃದ್ಧಿ ನಿಗಮಗಳು ಹಣದ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿವೆ. ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುವುದಲ್ಲಿಯೂ ವಿಳಂಬವಾಗುತ್ತಿದೆ ಎಂದು ಅವರು ದೂರಿದರು.
ಸುದ್ದಿಗೋಷ್ಠಿಯಲ್ಲಿ ಎಂಎಲ್ಸಿ ಶಶಿಲ್ ಜಿ ನಮೋಶಿ, ಶಾಸಕ ಬಸವರಾಜ ಮತ್ತಿಮಡು, ಅಶೋಕ್ ಬಗಲಿ, ಶರಣಪ್ಪ ತಳವಾರ, ಶಿವರಾಜ್ ಪಾಟೀಲ್ ರದ್ದೇವಾಡಗಿ, ಮಹೇಂದ್ರ ಪೂಜಾರಿ, ಚಂದ್ರಶೇಖರ ಪರಸರೆಡ್ಡಿ, ನರಸಪ್ಪಗೌಡ, ಬಾಬುರಾವ್ ಹಾಗರಗುಂಡಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



