ಪೊಲೀಸ್-ಮಾಧ್ಯಮ ಸಮನ್ವಯದಿಂದ ಶಾಂತಿ, ಸುವ್ಯವಸ್ಥೆ ಸಾಧ್ಯ: ದೀಪಕ್ ಬೋಸ್ ರೆಡ್ಡಿ

ಕೆಂಭಾವಿ: ಕಾನೂನು ಸುವ್ಯವಸ್ಥೆ ಕಾಪಾಡುವುದು, ಅಪರಾಧಗಳನ್ನು ತಡೆಗಟ್ಟುವುದು ಹಾಗೂ ಸಾರ್ವಜನಿಕರಲ್ಲಿ ಭದ್ರತಾ ಜಾಗೃತಿ ಮೂಡಿಸುವಲ್ಲಿ ಮಾಧ್ಯಮದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಶಹಾಪುರ ವೃತ್ತದ ಸರ್ಕಲ್ ಇನ್ಸ್‌ಪೆಕ್ಟರ್ ದೀಪಕ್ ಬೋಸ್ ರೆಡ್ಡಿ ಹೇಳಿದರು.
ಪಟ್ಟಣದ ಕೆಂಭಾವಿ ಪೊಲೀಸ್ ಠಾಣೆ ಇತ್ತೀಚೆಗೆ ಹುಣಸಿಗಿ ವೃತ್ತದಿಂದ ಶಹಾಪುರ ವೃತ್ತಕ್ಕೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆ ಮತ್ತು ಮಾಧ್ಯಮದ ನಡುವೆ ಉತ್ತಮ ಸಮನ್ವಯವಿದ್ದರೆ ಸಮಾಜದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ನೆರವಾಗುತ್ತದೆ. ಅಪರಾಧ ಪ್ರಕರಣಗಳ ಕುರಿತು ನಿಖರ ಹಾಗೂ ಸತ್ಯ ಮಾಹಿತಿಯನ್ನು ಜನರಿಗೆ ತಲುಪಿಸುವ ಮೂಲಕ ವದಂತಿಗಳಿಗೆ ಕಡಿವಾಣ ಹಾಕಲು ಮಾಧ್ಯಮ ಸಹಕಾರಿಯಾಗಬೇಕು. ಸಾರ್ವಜನಿಕರಿಗೆ ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನೂ ಮಾಧ್ಯಮ ಸಮರ್ಥವಾಗಿ ನಿರ್ವಹಿಸಬೇಕೆಂದು ಅವರು ಹೇಳಿದರು.
ಪೊಲೀಸ್ ಇಲಾಖೆಯ ವಿವಿಧ ಕಾರ್ಯಾಚರಣೆಗಳು, ಜನಪರ ಯೋಜನೆಗಳು ಹಾಗೂ ಸೇವಾ ಚಟುವಟಿಕೆಗಳನ್ನು ಜನರಿಗೆ ತಲುಪಿಸುವಲ್ಲಿ ಮಾಧ್ಯಮವು ಪರಿಣಾಮಕಾರಿ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇಲಾಖೆಯಲ್ಲಿ ಸುಮಾರು 21 ವರ್ಷಗಳ ಸೇವಾ ಅನುಭವವನ್ನು ಹಂಚಿಕೊಂಡ ಅವರು, ಸಾರ್ವಜನಿಕರ ವಿಶ್ವಾಸ ಗಳಿಸುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ಸದಾ ಬದ್ಧನಾಗಿರುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಿಎಸ್ಐ ಅಮೋಜ್ ಕಾಂಬಳೆ, ಕ್ರೈಂ ಪಿಎಸ್ಐ ಹಣಮಂತ್ರಾಯ ಸಿದ್ದಾಪುರ, ಪೊಲೀಸ್ ಸಿಬ್ಬಂದಿ ಹಾಗೂ ವಿವಿಧ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.



