ಕಲ್ಯಾಣ ಕರ್ನಾಟಕಜಿಲ್ಲಾಸುದ್ದಿಗಳು

ಕರ್ಜಗಿ ವಸತಿ ಶಾಲೆ ಆಹಾರ ವಿಷ ಪ್ರಕರಣ: ಪ್ರಾಂಶುಪಾಲ, ವಾರ್ಡನ್ ಅಮಾನತು

55 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆಗೆ ಕಠಿಣ ಕ್ರಮ; ಇಲಾಖಾ ತನಿಖೆ ಮುಂದುವರಿಕೆ

ಕಲಬುರಗಿ, ಆ. 2: ಜಿಲ್ಲೆಯ ಅಫಜಲಪುರ ತಾಲೂಕಿನ ಕರ್ಜಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವನೆಯಿಂದ 55 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಪ್ರಾಂಶುಪಾಲ ಶರಣಬಸಪ್ಪ ಪಾಟೀಲ ಹಾಗೂ ವಾರ್ಡನ್ ರವಿ ವಾಲಿ ಅವರನ್ನು ಅಮಾನತುಗೊಳಿಸಲಾಗಿದೆ.

ಈ ಕುರಿತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಶಿವಸ್ವಾಮಿ ಬಿ. (ಕೆಎಎಸ್) ಆದೇಶ ಹೊರಡಿಸಿದ್ದು, ಕರ್ತವ್ಯ ಲೋಪ ಹಾಗೂ ಬೇಜವಾಬ್ದಾರಿತನದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ವಸತಿ ಶಾಲೆಯ ವಿದ್ಯಾರ್ಥಿಗಳ ಆರೋಗ್ಯದ ಸುರಕ್ಷತೆ ಹಾಗೂ ಆಹಾರದ ಗುಣಮಟ್ಟವನ್ನು ಖಾತ್ರಿಪಡಿಸುವುದು ಸಂಬಂಧಪಟ್ಟ ಅಧಿಕಾರಿಗಳ ಪ್ರಮುಖ ಜವಾಬ್ದಾರಿಯಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಂದೇ ವೇಳೆ 55 ವಿದ್ಯಾರ್ಥಿಗಳು ಅಸ್ವಸ್ಥರಾಗುವಂತಹ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪ್ರಾಥಮಿಕ ಪರಿಶೀಲನೆಯಲ್ಲಿಯೇ ಕರ್ತವ್ಯ ನಿರ್ಲಕ್ಷ್ಯದ ಅಂಶಗಳು ಕಂಡುಬಂದಿರುವ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆ ಪೂರ್ಣಗೊಳ್ಳುವವರೆಗೆ ಅಮಾನತು ಕ್ರಮ ಜಾರಿಯಲ್ಲಿರಲಿದೆ. ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ–1957ರ ನಿಯಮ 10(1)(ಡಿ) ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ತಿದ್ದುಪಡಿ ನಿಯಮಗಳು–2025ರ ಅನ್ವಯ ಈ ಆದೇಶ ಹೊರಡಿಸಲಾಗಿದೆ.

ಇದಕ್ಕೂ ಮುನ್ನ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ ಅವರು ಶಾಲೆಯ ಅಡುಗೆ ಸಹಾಯಕರನ್ನು ಅಮಾನತುಗೊಳಿಸಿದ್ದರು. ಘಟನೆಯ ಸಂಪೂರ್ಣ ಹಿನ್ನೆಲೆ ಹಾಗೂ ನಿರ್ಲಕ್ಷ್ಯದ ಬಗ್ಗೆ ಇಲಾಖಾ ಮಟ್ಟದಲ್ಲಿ ಸಮಗ್ರ ತನಿಖೆ ಮುಂದುವರಿದಿದ್ದು, ವರದಿ ಆಧರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರ್ಜಗಿ ವಸತಿ ಶಾಲೆಯಲ್ಲಿ ನಡೆದ ಈ ಘಟನೆ ಜಿಲ್ಲೆಯಾದ್ಯಂತ ಆತಂಕಕ್ಕೆ ಕಾರಣವಾಗಿದ್ದು, ವಸತಿ ಶಾಲೆಗಳಲ್ಲಿ ಆಹಾರದ ಗುಣಮಟ್ಟ ಹಾಗೂ ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆ ಕುರಿತು ಕಟ್ಟುನಿಟ್ಟಿನ ಮೇಲ್ವಿಚಾರಣೆ ಅಗತ್ಯ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

Related Articles

Leave a Reply

Your email address will not be published. Required fields are marked *

Back to top button