ಕಲ್ಯಾಣ ಕರ್ನಾಟಕಜಿಲ್ಲಾಸುದ್ದಿಗಳು

‘ಬದಲಾವಣೆ ಅವಶ್ಯ’ ಘೋಷಣೆಯಡಿ ಆಗಸ್ಟ್ 6ರಿಂದ ಸಿಪಿಐ ಪಾದಯಾತ್ರೆ

ಜನರ ಸಮಸ್ಯೆಗಳ ಪಟ್ಟಿ ಮಾಡಿ ಸರ್ಕಾರದ ಗಮನಕ್ಕೆ ತರಲು ನಿರ್ಧಾರ: ಡಾ. ಮಹೇಶಕುಮಾರ ರಾಠೋಡ

ಕಲಬುರಗಿ, ಆ. 2: ‘ಬದಲಾವಣೆ ಅವಶ್ಯವಾಗಿದೆ’ ಎಂಬ ಘೋಷಣೆಯಡಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ)ವು ಆಗಸ್ಟ್ 6ರಿಂದ 15ರವರೆಗೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ ಜನರ ಸಮಸ್ಯೆಗಳನ್ನು ಸಂಗ್ರಹಿಸಿ, ಅವುಗಳ ಪರಿಹಾರಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಲಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ. ಮಹೇಶಕುಮಾರ ರಾಠೋಡ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಪಕ್ಷದ ಶಾಖೆಗಳ ಮೂಲಕ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಅದರ ಭಾಗವಾಗಿ ಕಲಬುರಗಿ ಜಿಲ್ಲೆಯಲ್ಲಿಯೂ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪಾದಯಾತ್ರೆ ನಡೆಸಲಾಗುವುದು ಎಂದು ತಿಳಿಸಿದರು.

ಆಗಸ್ಟ್ 6ರಂದು ಜೇವರ್ಗಿ ತಾಲೂಕಿನ ಮದರಿ, ಆಳಂದ ತಾಲೂಕಿನ ರುದ್ರವಾಡಿ ಹಾಗೂ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮಗಳಿಂದ ಪಾದಯಾತ್ರೆಗೆ ಚಾಲನೆ ದೊರೆಯಲಿದ್ದು, ಬಳಿಕ ಜಿಲ್ಲೆಯ ಸುಮಾರು 100 ಗ್ರಾಮಗಳಲ್ಲಿ ಜನಸಂಪರ್ಕ ಕಾರ್ಯಕ್ರಮ ನಡೆಯಲಿದೆ. ಪಕ್ಷದ ಕಾರ್ಯಕರ್ತರು, ವಿವಿಧ ಸಂಘಟನೆಗಳ ಮುಖಂಡರು, ಹಿತೈಷಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.

ದೇಶದ ಬಹುತೇಕ ಸರ್ಕಾರಗಳು ಜನರ ಮೂಲಭೂತ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ನೀಡುವಲ್ಲಿ ವಿಫಲವಾಗಿವೆ. ಸಂವಿಧಾನದ ಆಶಯಗಳು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅನುಗುಣವಾಗಿ ಆಡಳಿತ ನಡೆಯುತ್ತಿಲ್ಲ. ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಅವುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯ ಎಂಬ ಸಂದೇಶವನ್ನು ಪಾದಯಾತ್ರೆಯ ಮೂಲಕ ಜನರಿಗೆ ತಲುಪಿಸಲಾಗುವುದು ಎಂದು ಹೇಳಿದರು.

ಕೃಷಿ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್, ವಿಮೆ, ಸಾರಿಗೆ ಸೇರಿದಂತೆ ವಿವಿಧ ಕ್ಷೇತ್ರಗಳ ನೀತಿಗಳಲ್ಲಿ ಮೂಲಭೂತ ಬದಲಾವಣೆ ಅಗತ್ಯವಿದೆ. ಚುನಾವಣೆಗಳು ಹಣಬಲದ ಪ್ರಭಾವದಿಂದ ದೂರಾಗಿ, ಮತಾನುಪಾತದ ಆಧಾರದ ಮೇಲೆ ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣಾ ವ್ಯವಸ್ಥೆ ಜಾರಿಗೆ ಬರಬೇಕೆಂಬ ಬೇಡಿಕೆಯನ್ನು ಸಹ ಪಕ್ಷ ಮುಂದಿರಿಸುತ್ತಿದೆ ಎಂದು ತಿಳಿಸಿದರು.

ಪಾದಯಾತ್ರೆ ವೇಳೆ ಜಿಲ್ಲೆಯ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು, ರಸ್ತೆ, ಸಾರ್ವಜನಿಕ ಶೌಚಾಲಯ, ಶಾಲೆ, ಆರೋಗ್ಯ ಮತ್ತು ಸಾರಿಗೆ ಸೌಲಭ್ಯಗಳ ಅಭಿವೃದ್ಧಿ, ಕಲಬುರಗಿಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ ಪರಿಹಾರ ಕಾಮಗಾರಿಗಳ ಆರಂಭ, ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಗಳ ಅನುಷ್ಠಾನ, ನಿವೇಶನ ಮತ್ತು ವಸತಿ ರಹಿತರಿಗೆ ಜಮೀನು ಹಾಗೂ ಮನೆಗಳ ಒದಗಿಕೆ, ಸ್ಥಗಿತಗೊಂಡಿರುವ ಸಾಮಾಜಿಕ ಭದ್ರತಾ ಪಿಂಚಣಿಗಳ ತಕ್ಷಣದ ಬಿಡುಗಡೆ ಮತ್ತು ಮೊತ್ತವನ್ನು ₹3,000ಕ್ಕೆ ಹೆಚ್ಚಿಸುವುದು, ವಿವಿಧ ಇಲಾಖೆಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಹುದ್ದೆಗಳ ಭರ್ತಿ, ನೀರಾವರಿ ಯೋಜನೆಗಳ ತ್ವರಿತ ಪೂರ್ಣಗೊಳಿಕೆ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಲ್ಲಿನ ಭ್ರಷ್ಟಾಚಾರದ ಸಮಗ್ರ ತನಿಖೆ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಹ ಕಾರ್ಯದರ್ಶಿ ಪ್ರಭುದೇವ ಯಳಸಂಗಿ, ಸಿದ್ದಪ್ಪ ಪಾಲ್ಕಿ, ಭೀಮಾಶಂಕರ ಮಾಡಿಯಾಳ, ಸಾಜೀದ್ ಅಹಮದ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button