ಜೇವರ್ಗಿ ಮತಕ್ಷೇತ್ರದ 246 ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಯ ಡಿಜಿಟಲೀಕರಣ ಶೇ.100 ಪೂರ್ಣ

ಜೇವರ್ಗಿ, ಆ. 2: ಜೇವರ್ಗಿ ವಿಧಾನಸಭಾ ಮತಕ್ಷೇತ್ರದ 279 ಮತಗಟ್ಟೆಗಳ ಪೈಕಿ 246 ಮತಗಟ್ಟೆಗಳಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯದಡಿ ಡಿಜಿಟಲೀಕರಣ ಶೇ.100ರಷ್ಟು ಪೂರ್ಣಗೊಂಡಿದ್ದು, ಉಳಿದ ಅರ್ಜಿಗಳ ಪರಿಶೀಲನೆ ಹಾಗೂ ಡಿಜಿಟಲೀಕರಣ ಕಾರ್ಯವನ್ನು ಮನೆಮನೆಗೆ ಭೇಟಿ ನೀಡಿ ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಮತದಾರರ ನೋಂದಣಿ ಅಧಿಕಾರಿ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಮಾರುತಿ ಬ್ಯಾಕವಾಡ ತಿಳಿಸಿದ್ದಾರೆ.
ಶನಿವಾರ ಜೇವರ್ಗಿ ತಹಸೀಲ್ದಾರ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೇವರ್ಗಿ ಮತಕ್ಷೇತ್ರದಲ್ಲಿ ಒಟ್ಟು 2,59,061 ಮತದಾರರಿದ್ದು, ಈ ಪೈಕಿ 2,15,605 ಅರ್ಜಿಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ಇನ್ನೂ 43,141 ಅರ್ಜಿಗಳು ಬಾಕಿಯಿದ್ದು, ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಅಧಿಕಾರಿಗಳು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಿದರು.
ಮರಣ ಹೊಂದಿರುವವರು, ಸ್ಥಳಾಂತರಗೊಂಡಿರುವವರು ಹಾಗೂ ಗೈರುಹಾಜರಿಯಾಗಿರುವ (ಎಎಸ್ಡಿಡಿ) ಮತದಾರರ ವಿವರಗಳನ್ನು ಗ್ರಾಮ ಪಂಚಾಯಿತಿಗಳ ಗ್ರಾಮಸಭೆ ಹಾಗೂ ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ ಸಭೆಗಳ ಮೂಲಕ ಪರಿಶೀಲಿಸಿ ಅಂತಿಮಗೊಳಿಸಲಾಗುತ್ತಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಅಥವಾ ಇತರೆ ವಿವರಗಳಲ್ಲಿ ತಪ್ಪಿದ್ದರೆ ತಿದ್ದುಪಡಿಗೆ ಅವಕಾಶವಿದ್ದು, ಆಗಸ್ಟ್ 8ರೊಳಗೆ ಆಕ್ಷೇಪಣೆ ಹಾಗೂ ತಿದ್ದುಪಡಿ ಅರ್ಜಿಗಳನ್ನು ಸಲ್ಲಿಸಬಹುದು ಎಂದು ತಿಳಿಸಿದರು.
ತಹಸೀಲ್ದಾರ್ ಅಂಜುಮ ತಬಸುಮ್ ಮಾತನಾಡಿ, ಯಾವುದೇ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಪಟ್ಟಣದ 24 ಮತಗಟ್ಟೆಗಳ ಪೈಕಿ 23 ಮತಗಟ್ಟೆಗಳಲ್ಲಿ ಶೇ.100ರಷ್ಟು ಡಿಜಿಟಲೀಕರಣ ಪೂರ್ಣಗೊಂಡಿದ್ದು, ಉಳಿದ ಒಂದು ಮತಗಟ್ಟೆಯ ಕಾರ್ಯವನ್ನೂ ಶೀಘ್ರವೇ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಮತದಾರರಲ್ಲಿ ಜಾಗೃತಿ ಮೂಡಿಸಲು ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮಸಭೆಗಳು ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ವಾರ್ಡ್ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಮತದಾರರಿಗೆ ಅಗತ್ಯ ಸಹಾಯ ಮತ್ತು ಮಾಹಿತಿ ನೀಡಲು ತಹಸೀಲ್ದಾರ್ ಕಚೇರಿಯಲ್ಲಿ ವಿಶೇಷ ವಾರ್ ರೂಂ ಸ್ಥಾಪಿಸಲಾಗಿದ್ದು, ಸಿಬ್ಬಂದಿ ದೂರವಾಣಿ ಮೂಲಕ ಮತದಾರರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಕೆಗೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ತಿಳಿಸಿದರು.
ಮತದಾರರ ಅನುಕೂಲಕ್ಕಾಗಿ ಸಹಾಯವಾಣಿ ಆರಂಭಿಸಲಾಗಿದ್ದು, 08442-236025 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಯಡ್ರಾಮಿ ತಹಸೀಲ್ದಾರ್ ಯಲ್ಲಪ್ಪ ಸುಭೇದಾರ ಹಾಗೂ ಸಂತೋಷಕುಮಾರ ಉಪಸ್ಥಿತರಿದ್ದರು.



