ಯಾದಗಿರಿ ದೊಡ್ಡ ಕೆರೆಗೆ ನೀರು ತುಂಬಿಸದ ಜಿಲ್ಲಾಡಳಿತ ವಿರುದ್ಧ ರೈತರ ಆಕ್ರೋಶ; ಕೆರೆಯಲ್ಲೇ ಕುಳಿತು ಪ್ರತಿಭಟಿಸಿದ ಉಮೇಶ್ ಮುದ್ನಾಳ್

ಯಾದಗಿರಿ, ಆ. 2: ನಗರದ ಹೊರವಲಯದ ದೊಡ್ಡ ಕೆರೆಗೆ ಸನ್ನತಿ ಬ್ರಿಡ್ಜ್-ಕಂ-ಬ್ಯಾರೇಜ್ನಿಂದ ನೀರು ತುಂಬಿಸುವ ಯೋಜನೆ ಜಾರಿಯಾಗದೆ ಮೂರು ವರ್ಷ ಕಳೆದರೂ ರೈತರ ಜಮೀನುಗಳಿಗೆ ನೀರು ತಲುಪಿಲ್ಲ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ್ ಜಿಲ್ಲಾಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ದೊಡ್ಡ ಕೆರೆ ಕೆಳಭಾಗದ ರೈತರ ಮನವಿಗೆ ಸ್ಪಂದಿಸಿದ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ರೈತರೊಂದಿಗೆ ಖಾಲಿ ಕೆರೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಈ ವರ್ಷ ಮುಂಗಾರು ಮಳೆ ಸಮರ್ಪಕವಾಗದ ಹಿನ್ನೆಲೆಯಲ್ಲಿ ರೈತರು ನೀರಾವರಿ ಸೌಲಭ್ಯವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಎಂದು ಹೇಳಿದರು.
ಸನ್ನತಿ ಬ್ರಿಡ್ಜ್-ಕಂ-ಬ್ಯಾರೇಜ್ನಿಂದ ಯಾದಗಿರಿ ದೊಡ್ಡ ಕೆರೆಗೆ ನೀರು ಹರಿಸುವ ಉದ್ದೇಶದಿಂದ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಪೈಪ್ಲೈನ್ ಅಳವಡಿಸಿ ಉದ್ಘಾಟನೆ ಮಾಡಲಾಗಿದೆ. ಆದರೆ ಇದುವರೆಗೆ ಒಂದು ಹನಿ ನೀರೂ ಕೆರೆಗೆ ಹರಿದಿಲ್ಲ. ಪರಿಣಾಮ ಕೆರೆಯ ಕೆಳಭಾಗದ ರೈತರು ಮಳೆ ನೀರನ್ನೇ ನಂಬಿಕೊಂಡು ಬಿತ್ತನೆಗೆ ಮುಂದಾಗುವ ದುಸ್ಥಿತಿ ಎದುರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಭೀಮಾ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದೆ. ಗುರುಸೂಣಿಗಿ ಬ್ರಿಡ್ಜ್-ಕಂ-ಬ್ಯಾರೇಜ್ನಿಂದ ಹಲವು ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಆದರೆ ಸನ್ನತಿ ಬ್ರಿಡ್ಜ್-ಕಂ-ಬ್ಯಾರೇಜ್ ವ್ಯಾಪ್ತಿಯ ಯಾದಗಿರಿ ದೊಡ್ಡ ಕೆರೆ ಸೇರಿದಂತೆ ಇತರೆ ಕೆರೆಗಳಿಗೆ ನೀರು ಬಿಡದಿರುವುದು ಅರ್ಥವಾಗದ ಸಂಗತಿಯಾಗಿದೆ ಎಂದು ಪ್ರಶ್ನಿಸಿದರು.
ಭೀಮಾ ನದಿಯಲ್ಲಿ ಹರಿಯುತ್ತಿರುವ ನೀರನ್ನು ತಕ್ಷಣವೇ ಯಾದಗಿರಿ ದೊಡ್ಡ ಕೆರೆ ಸೇರಿದಂತೆ ಎಲ್ಲಾ ಕೆರೆಗಳಿಗೆ ಹಗಲು-ರಾತ್ರಿ ನಿರಂತರವಾಗಿ ತುಂಬಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುವುದರ ಜೊತೆಗೆ ರೈತರು ಭತ್ತ, ತರಕಾರಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕೆರೆಗಳ ಸ್ಥಿತಿಗತಿಯನ್ನು ಪರಿಶೀಲಿಸಿ, ಅವುಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ನೀರು ತುಂಬಿಸುವ ಕ್ರಮ ಕೈಗೊಳ್ಳಬೇಕು. ಇದರಿಂದ ಅಂತರ್ಜಲ ಮಟ್ಟವೂ ಏರಿಕೆಯಾಗಲಿದ್ದು, ರೈತರಿಗೆ ಹಾಗೂ ಸಾರ್ವಜನಿಕರಿಗೆ ದೀರ್ಘಕಾಲಿಕ ಪ್ರಯೋಜನವಾಗಲಿದೆ ಎಂದು ಅವರು ಸಲಹೆ ನೀಡಿದರು.
ಪ್ರತಿಭಟನೆಯಲ್ಲಿ ಶರಣಗೌಡ, ಭೀಮಾಶಂಕರ, ಮಹ್ಮದ್ ಹಸನ್, ದೇವಪ್ಪ, ನಿಂಗಪ್ಪ, ಸಿದ್ದಪ್ಪ, ಮಲ್ಲಪ್ಪ, ಸೂರಪ್ಪ, ಮಹಾದೇವಪ್ಪ, ಮಹಾಂತೇಶ, ಹಣಮಂತ, ಭೀಮಾರಾಯ, ಸುಧಾಕರ, ಮಲ್ಕಪ್ಪ, ಸಾಬಣ್ಣ, ಮಲ್ಲಣ್ಣಗೌಡ, ಕೃಷ್ಣ, ಮರೆಣ್ಣ, ಶಿವಕುಮಾರ, ಮಹೇಶ್, ಸುರೇಶ್, ಮಾರ್ತಂಡಪ್ಪ, ಮರೆಪ್ಪ, ಸದ್ದಾಂ ಸೇರಿದಂತೆ ಅನೇಕ ರೈತರು ಹಾಗೂ ಯುವಕರು ಭಾಗವಹಿಸಿದ್ದರು.



