ಕಿಶೋರ್ ಕುಮಾರ್ ಜನ್ಮದಿನ ಅಂಗವಾಗಿ ಸಂಗೀತ ಸಂಜೆ: ಗಾನಲಹರಿಗೆ ಮನಸೋತ ಸಂಗೀತಾಸಕ್ತರು

ಕಲಬುರಗಿ: ಖ್ಯಾತ ಹಿಂದಿ ಚಲನಚಿತ್ರ ಹಿನ್ನೆಲೆ ಗಾಯಕ ಕಿಶೋರ್ ಕುಮಾರ್ ಅವರ 97ನೇ ಜನ್ಮದಿನದ ಅಂಗವಾಗಿ ನಾದಪ್ರಿಯ ಸಾಂಸ್ಕೃತಿಕ ಗೆಳೆಯರ ಬಳಗ ವತಿಯಿಂದ ನಗರದ ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ ‘ಏಕ್ ಶಾಮ್ ಕಿಶೋರ್ ದಾ ಕೆ ನಾಮ್’ ಸಂಗೀತ ಸಂಜೆ ಕಾರ್ಯಕ್ರಮ ಸಂಗೀತಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮವನ್ನು ನಟ ಹಾಗೂ ನಿರ್ದೇಶಕ ನಾಗರಾಜ ಕುಂಬಾರ ಉದ್ಘಾಟಿಸಿ ಮಾತನಾಡಿ, ಕಿಶೋರ್ ಕುಮಾರ್ ಅವರ ಗಾಯನ ಇಂದಿಗೂ ಸಂಗೀತಾಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಇಂತಹ ಕಾರ್ಯಕ್ರಮಗಳು ಉತ್ತಮ ಸಂಗೀತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಗಾಯಕ ರಮೇಶ್ ಜೋಶಿ ಅವರು ಕಿಶೋರ್ ಕುಮಾರ್ ಅವರ ಜನಪ್ರಿಯ ಗೀತೆಗಳನ್ನು ಮನೋಜ್ಞವಾಗಿ ಪ್ರಸ್ತುತಪಡಿಸಿ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದರು. ಉಷಾ ಡಿಸೋಜಾ ಅವರ ಸುಮಧುರ ಗಾಯನವೂ ಸಂಗೀತ ಪ್ರಿಯರನ್ನು ರಂಜಿಸಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಸದಾಶಿವ ಜಿಡಗೆಕರ್ ಅವರು ಕಿಶೋರ್ ಕುಮಾರ್ ಅವರ ಸಂಗೀತ ಸೇವೆಯನ್ನು ಸ್ಮರಿಸಿ, ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಗೀತ ಸಂಸ್ಕೃತಿಯ ಉಳಿವಿಗೆ ಅಗತ್ಯವೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾದಪ್ರಿಯ ಸಾಂಸ್ಕೃತಿಕ ಗೆಳೆಯರ ಬಳಗದ ಅಧ್ಯಕ್ಷ ಕೆ.ಪಿ. ಗಿರಿಧರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಳಗವು ಮುಂದೆಯೂ ಗುಣಮಟ್ಟದ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಕಲ್ಪ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಡಾ. ಅಂಬುಜಾ ಮಳಖೇಡಕರ್, ಎಸ್.ಎಸ್. ಪಾಟೀಲ, ನಾರಾಯಣ ಜೋಶಿ ಸೇರಿದಂತೆ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಪ್ರಸಾದ್ ಅಷ್ಟಗಿ ಕಾರ್ಯಕ್ರಮ ನಿರೂಪಿಸಿದರು.
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಸಂಗೀತಾಸಕ್ತರು ಕಿಶೋರ್ ಕುಮಾರ್ ಅವರ ಸದಾಬಹಾರ ಗೀತೆಗಳನ್ನು ಆಸ್ವಾದಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.



