ಜಿಲ್ಲಾಸುದ್ದಿಗಳು

ಖದೀರ್ ಪಾಶಾ ಆತ್ಮಹತ್ಯೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಆಗ್ರಹ, ಪರಿಹಾರಕ್ಕೆ ವೇದಿಕೆ ಒತ್ತಾಯ

ಕಲಬುರಗಿ: ಕಾಳಗಿ ತಾಲೂಕಿನ ರಟಕಲ್ ಗ್ರಾಮದ ಸೆಂಟ್ರಿಂಗ್ ಕಾರ್ಮಿಕ ಖದೀರ್ ಪಾಶಾ ಆತ್ಮಹತ್ಯೆ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಿ, ಮೃತರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಹಾಗೂ ಅಗತ್ಯ ನೆರವು ನೀಡಬೇಕು ಎಂದು ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.

ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಿವಲಿಂಗ ಹಳಮನಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ಖದೀರ್ ಪಾಶಾ ಅವರು ಚಿತ್ತಾಪುರ ತಾಲೂಕಿನ ಶ್ರೀ ಸಿಮೆಂಟ್ ಕಂಪನಿ ಹಿಂಭಾಗದ ಸೇತುವೆ ನಿರ್ಮಾಣ ಕಾಮಗಾರಿಯನ್ನು ಗುತ್ತಿಗೆದಾರರಾದ ವಿಜಯಕುಮಾರ ಚವ್ಹಾಣ ಮತ್ತು ಅರವಿಂದ ಚವ್ಹಾಣ ಅವರೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಂತೆ ಪೂರ್ಣಗೊಳಿಸಿದ್ದರು. ಆದರೆ, ಕಾಮಗಾರಿಗೆ ನೀಡಬೇಕಿದ್ದ ಸುಮಾರು ₹15 ರಿಂದ ₹16 ಲಕ್ಷ ಬಾಕಿ ಹಣವನ್ನು ಕೇಳಿದಾಗ ಗುತ್ತಿಗೆದಾರರು ಜೀವ ಬೆದರಿಕೆ ಹಾಕಿದ್ದು, ರೌಡಿಗಳನ್ನು ಮನೆಗೆ ಕಳುಹಿಸಿ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.

ಈ ಬೆದರಿಕೆಗಳಿಂದ ಮನನೊಂದ ಖದೀರ್ ಪಾಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಅವರ ಪತ್ನಿ ರಟಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ, ಪ್ರಕರಣ ದಾಖಲಾಗಿ ಹಲವು ದಿನಗಳಾದರೂ ಆರೋಪಿಗಳನ್ನು ಇನ್ನೂ ಬಂಧಿಸದಿರುವುದು ಆತಂಕಕಾರಿ ಎಂದು ವೇದಿಕೆ ಆರೋಪಿಸಿದೆ.

ಗೃಹ ಸಚಿವರ ಕ್ಷೇತ್ರದಲ್ಲಿಯೇ ಇಂತಹ ಗಂಭೀರ ಪ್ರಕರಣದಲ್ಲಿ ಕ್ರಮ ವಿಳಂಬವಾಗಿರುವುದು ಖಂಡನೀಯ. ಕೂಡಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ, ಮೃತರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಹಾಗೂ ಜೀವನೋಪಾಯಕ್ಕೆ ಅಗತ್ಯ ನೆರವು ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮುಂದಿನ ಏಳು ದಿನಗಳೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವೇದಿಕೆ ಎಚ್ಚರಿಕೆ ನೀಡಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಂದೀಪ್ ಭರಣಿ, ವಿಶ್ವನಾಥ್, ಸತೀಶ್, ನಾಗರಾಜ್ ಪಾಟೀಲ್ ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button