ಜಿಲ್ಲಾಸುದ್ದಿಗಳು

ಶ್ರಾವಣ ಸೋಮವಾರ ಶಾಲಾ-ಕಾಲೇಜುಗಳಿಗೆ ಅರ್ಧ ದಿನ, ಮೂರನೇ ಸೋಮವಾರ ಪೂರ್ಣ ರಜೆ ಘೋಷಿಸಲು ಮನವಿ

ಕಲಬುರಗಿ: ಶ್ರಾವಣ ಮಾಸದ ಧಾರ್ಮಿಕ ಆಚರಣೆಗಳಿಗೆ ಅನುಕೂಲವಾಗುವಂತೆ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಶ್ರಾವಣ ಮಾಸದ ಪ್ರತಿ ಸೋಮವಾರ ಅಪರಾಹ್ನ ರಜೆ ಹಾಗೂ ಮೂರನೇ (ನಡುವಿನ) ಸೋಮವಾರ ಪೂರ್ಣ ದಿನ ರಜೆ ಘೋಷಿಸಬೇಕೆಂದು ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ.) ಜಿಲ್ಲಾ ಘಟಕವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಸಂಘದ ಜಿಲ್ಲಾ ಅಧ್ಯಕ್ಷೆ ಸೇವಂತಾ ಪಿ. ಚವ್ಹಾಣ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಪಾಟೀಲ ನೇತೃತ್ವದಲ್ಲಿ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ (ಡಿಡಿಪಿಐ) ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ, ಕಲಬುರಗಿ ಜಿಲ್ಲೆ ಶರಣರ ಬೀಡು ಹಾಗೂ ಸೂಫಿ ಸಂತರ ನಾಡಾಗಿದ್ದು, ಶ್ರಾವಣ ಮಾಸವನ್ನು ಜನರು ಭಕ್ತಿಭಾವದಿಂದ ಪಾರಂಪರಿಕವಾಗಿ ಆಚರಿಸುತ್ತಾರೆ ಎಂದು ಉಲ್ಲೇಖಿಸಲಾಗಿದೆ.

ಹಿಂದೆ ಶ್ರಾವಣ ಮಾಸದ ಪ್ರತಿಯೊಂದು ಸೋಮವಾರ ಅಪರಾಹ್ನ ರಜೆ ಹಾಗೂ ಮೂರನೇ ಸೋಮವಾರ ಪೂರ್ಣ ದಿನ ರಜೆ ನೀಡುವ ಪದ್ಧತಿ ಜಾರಿಯಲ್ಲಿತ್ತು. ಶ್ರಾವಣ ಮಾಸವು ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವ ಹೊಂದಿದ್ದು, ಸೋಮವಾರಗಳಲ್ಲಿ ಸಾವಿರಾರು ಭಕ್ತರು ಶಿವನ ಆರಾಧನೆ, ಉಪವಾಸ, ವಿಶೇಷ ಪೂಜೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಹಿಂದಿನ ಪದ್ಧತಿಯನ್ನು ಪುನಃ ಜಾರಿಗೆ ತರಬೇಕೆಂದು ಸಂಘ ಒತ್ತಾಯಿಸಿದೆ.

ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿ ಸಂಬಂಧಿತ ಇಲಾಖೆಗೆ ಶಿಫಾರಸು ಮಾಡುವ ಮೂಲಕ ಶ್ರಾವಣ ಮಾಸದ ಪಾರಂಪರಿಕ ಧಾರ್ಮಿಕ ಆಚರಣೆಗೆ ಅವಕಾಶ ಕಲ್ಪಿಸಬೇಕೆಂದು ಸಂಘವು ಮನವಿಯಲ್ಲಿ ವಿನಂತಿಸಿದೆ.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button