ಜಿಲ್ಲಾಸುದ್ದಿಗಳು

ನೃತ್ಯ–ಸಂಗೀತಕ್ಕೆ ಸಂಭ್ರಮದ ವೇದಿಕೆ: ಕಲಾ ಪರಂಪರೆ ಉಳಿಸುವಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪಾತ್ರ ಮಹತ್ವದ್ದು

ಕಲಬುರಗಿ: ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಕರ್ನಾಟಕ ನೃತ್ಯ ಸಂಗೀತ ಕಲಾ ಸಂಸ್ಥೆ (ನೋಂ) ವತಿಯಿಂದ ಆಯೋಜಿಸಿದ್ದ ನೃತ್ಯೋತ್ಸವ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಜಮುನಾ ಅಶೋಕ್ ಗುತ್ತೇದಾರ್, ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ನೃತ್ಯ ಮತ್ತು ಸಂಗೀತದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಯುವ ಪ್ರತಿಭೆಗಳಿಗೆ ತಮ್ಮ ಕಲಾ ಸಾಮರ್ಥ್ಯವನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಿದ್ದು, ಭಾರತೀಯ ಕಲಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಸಂಸ್ಥೆಯ ಅಧ್ಯಕ್ಷ ಮುತ್ತಣ್ಣ ಬಚ್ಚನ್ ಬಾಗೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕ ನೃತ್ಯ ಸಂಗೀತ ಕಲಾ ಸಂಸ್ಥೆಯು ನೃತ್ಯ, ಸಂಗೀತ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳನ್ನು ನಿರಂತರವಾಗಿ ಆಯೋಜಿಸುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದು, ಹೊಸ ಪ್ರತಿಭೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನೃತ್ಯ ಕಲಾವಿದರಾದ ಮಂಜು ತೆಲಂಗಿ, ಅಶ್ವಿನಿ ಗುತ್ತೇದಾರ್, ಸಾಕ್ಷಿ ಮಾನೆ, ಕವಿತಾ ಕೋರೆಗಾವ್, ರೂಪಾ ಕುಲಕರ್ಣಿ, ಪೂರ್ಣಿಮಾ ರಾವ್, ವಿಜಯಲಕ್ಷ್ಮಿ ಎಚ್., ಲಲಿತಾ ಭಿಮುರಾವ್ ತೆಲಂಗಿ, ಉಮಾ ಬಿ. ಉದನೂರು, ಗಾಯತ್ರಿ ರೆಡ್ಡಿ, ರಾಧಿಕಾ ಕಮಲಾಪುರಕರ್, ದೀಕ್ಷಾ ರೋಹಿತ್, ಸ್ವಾತಿ ಮಂಜು ತೆಲಂಗಿ, ವೇದ ಬಚ್ಚನ್ ಹಾಗೂ ರಾಹುಲ್ ಆರ್.ಜೆ. ಸೇರಿದಂತೆ ಹಲವಾರು ಕಲಾವಿದರು ಮನಮೋಹಕ ನೃತ್ಯ ಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.

ವೈವಿಧ್ಯಮಯ ನೃತ್ಯ ರೂಪಗಳು, ಸಂಗೀತ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳಿಂದ ಕಾರ್ಯಕ್ರಮ ರಂಗೇರಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲಾವಿದರ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button