ಜಿಲ್ಲಾಸುದ್ದಿಗಳು

ರಾಷ್ಟ್ರಪತಿ ಭವನದ ‘ಆರ್ಟಿಸ್ಟ್ ರೆಸಿಡೆನ್ಸಿ’ಗೆ ಆಯ್ಕೆ: ಚಿತ್ರಕಲಾವಿದ ಜಗದೀಶ್ ಕಾಂಬಳೆಗೆ ಸನ್ಮಾನ

ಕಲಬುರಗಿ: ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರತಿಷ್ಠಿತ ‘ಆರ್ಟಿಸ್ಟ್ ರೆಸಿಡೆನ್ಸಿ’ ಯೋಜನೆಗೆ ಆಯ್ಕೆಯಾಗಿರುವ ಸುರಪುರದ ಖ್ಯಾತ ಚಿತ್ರಕಲಾವಿದ ಜಗದೀಶ್ ಕಾಂಬಳೆ ಅವರನ್ನು ಸಮಾನಮನಸ್ಕರ ಗುಂಪಿನ ಕಲಾವಿದರು ಅವರ ಸ್ವಗೃಹದಲ್ಲಿ ಸನ್ಮಾನಿಸಿ ಅಭಿನಂದಿಸಿದರು.

ಸುರಪುರ ಚಿತ್ರಕಲೆಯ ಪರಂಪರೆಯನ್ನು ಆಳವಾಗಿ ಅಧ್ಯಯನ ಮಾಡಿ, ಅದರ ತಂತ್ರ, ವಿನ್ಯಾಸ, ಬಣ್ಣಗಳ ಸಂಯೋಜನೆ ಹಾಗೂ ಕಲಾತ್ಮಕ ವೈಶಿಷ್ಟ್ಯಗಳನ್ನು ಪರಿಶ್ರಮದಿಂದ ಕರಗತ ಮಾಡಿಕೊಂಡಿರುವ ಪ್ರಮುಖ ಕಲಾವಿದರಲ್ಲಿ ಡಾ. ವಿಜಯ ಹಾಗರಗುಂಡಗಿ ಹಾಗೂ ಜಗದೀಶ್ ಕಾಂಬಳೆ ಪ್ರಮುಖರಾಗಿದ್ದಾರೆ. ಪ್ರಚಾರದಿಂದ ದೂರವಿದ್ದರೂ ತಮ್ಮ ಕಲಾಸಾಧನೆಯ ಮೂಲಕ ಸುರಪುರ ಚಿತ್ರಕಲೆಗೆ ವಿಶಿಷ್ಟ ಗುರುತನ್ನು ತಂದುಕೊಟ್ಟಿದ್ದಾರೆ ಎಂದು ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದ ರಾಷ್ಟ್ರಪತಿಯ ಅಧಿಕೃತ ನಿವಾಸವಾದ ರಾಷ್ಟ್ರಪತಿ ಭವನದಲ್ಲಿ ಹತ್ತು ದಿನಗಳ ಕಾಲ ನಡೆದ ಪ್ರತಿಷ್ಠಿತ ‘ಆರ್ಟಿಸ್ಟ್ ರೆಸಿಡೆನ್ಸಿ’ ಯೋಜನೆಯಲ್ಲಿ ಸುರಪುರ ಚಿತ್ರಕಲೆಯ ಪ್ರತಿನಿಧಿಯಾಗಿ ಜಗದೀಶ್ ಕಾಂಬಳೆ ಭಾಗವಹಿಸಿರುವುದು ರಾಜ್ಯ ಹಾಗೂ ರಾಷ್ಟ್ರಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಅವರ ಸಾಧನೆಯು ಸುರಪುರದ ಸಾಂಪ್ರದಾಯಿಕ ಚಿತ್ರಕಲೆಯನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಪರಿಚಯಿಸುವಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಸಮಾನಮನಸ್ಕರ ಗುಂಪಿನ ಕಲಾವಿದರಾದ ಸೂರ್ಯಕಾಂತ್ ನಂದೂರ್, ಭೀಮಸೇನ್ ರಾವ್ ಕುಲಕರ್ಣಿ, ಗಿರೀಶ್ ಕುಲಕರ್ಣಿ, ಅಭಿಜಿತ್ ಎಸ್.ಕೆ., ವಿಜಯ್ ಅವ್ರಾದ್, ಸುರೇಶ್ ಹಾಗೂ ಅರವಿಂದ್ ಕಾಂಬಳೆ ಅವರು ಜಗದೀಶ್ ಕಾಂಬಳೆ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

ಸುರಪುರ ಚಿತ್ರಕಲೆಯಂತಹ ಅಪರೂಪದ ಕಲಾಪರಂಪರೆಯನ್ನು ಉಳಿಸಿ ಬೆಳೆಸುತ್ತಿರುವ ಕಲಾವಿದರಿಗೆ ಇಂತಹ ಗೌರವಗಳು ನಿರಂತರವಾಗಿ ದೊರೆಯಲಿ ಹಾಗೂ ಅವರ ಸಾಧನೆಯ ಮೂಲಕ ಈ ಕಲೆಗೆ ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಮನ್ನಣೆ ಸಿಗಲಿ ಎಂದು ಸನ್ಮಾನ ಸಮಾರಂಭದಲ್ಲಿ ಆಶಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button