ಜಿಲ್ಲಾಸುದ್ದಿಗಳು

ಶಖಾಪುರದಲ್ಲಿ ದಲಿತ ಕುಟುಂಬದ ಮೇಲೆ ಹಲ್ಲೆ ಆರೋಪ: ಆರೋಪಿಗಳ ಬಂಧನಕ್ಕೆ ಆಗ್ರಹ

ಕೆಂಭಾವಿ: ಯಾದಗಿರಿ ಜಿಲ್ಲೆಯ ಸುರಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಖಾಪುರ ಎಸ್‌.ಎಚ್‌. ಗ್ರಾಮದಲ್ಲಿ ದಲಿತ ತಳವಾರ ಕುಟುಂಬದ ಸದಸ್ಯರ ಮೇಲೆ ಜಾತಿ ನಿಂದನೆ, ಅವಮಾನ ಹಾಗೂ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಕೆಂಭಾವಿ ಹೋಬಳಿ ಘಟಕದ ಪದಾಧಿಕಾರಿಗಳು ಶುಕ್ರವಾರ ಉಪತಹಸೀಲ್ದಾರ್‌ ಮುಖಾಂತರ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ, ಆಗಸ್ಟ್‌ 1ರಂದು ಬೆಳಿಗ್ಗೆ ಸುಮಾರು 9.30ಕ್ಕೆ ಗ್ರಾಮದ ದೇವಪ್ಪ ಶಿವಪ್ಪ ತಳವಾರ ಹಾಗೂ ಸಿದ್ದಮ್ಮ ಮಲ್ಲಪ್ಪ ತಳವಾರ ಅವರನ್ನು ಸಾರ್ವಜನಿಕ ಸ್ಥಳಕ್ಕೆ ಕರೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸುವುದರ ಜೊತೆಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 0194/2026 ದಾಖಲಾಗಿದ್ದು, ಪ್ರಕರಣದಲ್ಲಿರುವ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಸಮಿತಿ ಆಗ್ರಹಿಸಿದೆ.ದಲಿತ ಕುಟುಂಬಗಳಿಗೆ ಸಮರ್ಪಕ ಪೊಲೀಸ್ ಭದ್ರತೆ ಒದಗಿಸಬೇಕು, ಪ್ರತೀಕಾರದ ಉದ್ದೇಶದಿಂದ ಯಾವುದೇ ಸುಳ್ಳು ಪ್ರಕರಣ ದಾಖಲಿಸದಂತೆ ನೋಡಿಕೊಳ್ಳಬೇಕು ಹಾಗೂ ಗ್ರಾಮದಲ್ಲಿ ಭಯಮುಕ್ತ ವಾತಾವರಣ ನಿರ್ಮಿಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಆರೋಪಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಸಮಿತಿ ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ಕೆಂಭಾವಿ ಹೋಬಳಿ ಸಂಚಾಲಕ ತಿಪ್ಪಣ್ಣ ಬಿ. ಅಗ್ನಿ, ರಾಯಪ್ಪ ಯತ್ನಾಳ, ಮಾಳಪ್ಪ ಯತ್ನಾಳ, ಮಹೇಶ್ ಕಟ್ಟಿಮನಿ, ಸೈದಪ್ಪ ಅರಳುಗುಂಡಿಗಿ, ಶಿವಪ್ಪ ಮಾಳಳ್ಳಿಕರ, ಮಾದೇವಪ್ಪ ಬಸರಗಿಡ, ಶರಣಪ್ಪ ಅನ್ನೂರು, ಪರಶುರಾಮ ಕಡಕೋಳ, ಮಾರೆಪ್ಪ ವಸಗೇರಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button