ಜಿಲ್ಲೆ ಸುದ್ದಿ

ಡಾ. ಮಲ್ಲಿಕಾರ್ಜುನ ಖರ್ಗೆ ವಿರುದ್ಧದ ಜಾತಿ ನಿಂದನೆ ಖಂಡನೀಯ: ಲತಾ ರಾಠೋಡ್

ಕಲಬುರಗಿ, ಆ.14: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಜಾತಿ ಆಧಾರಿತ ಅವಮಾನಕಾರಿ ಹೇಳಿಕೆಗಳನ್ನು ನೀಡಿರುವುದನ್ನು ಕಲಬುರಗಿ ಮಹಾನಗರ ಪಾಲಿಕೆ ಸದಸ್ಯೆ ಹಾಗೂ ಮಾಜಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ರಾಠೋಡ್ ತೀವ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ದೇಶದಲ್ಲಿ ಸಂವಿಧಾನ ಜಾರಿಯಾಗಿ ಹಲವು ದಶಕಗಳು ಕಳೆದಿದ್ದರೂ ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆಯ ಮನೋಭಾವ ಇನ್ನೂ ಜೀವಂತವಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಂತಹ ಹಿರಿಯ ಹಾಗೂ ಗೌರವಾನ್ವಿತ ವ್ಯಕ್ತಿಯೇ ಜಾತಿ ಆಧಾರಿತ ಅವಮಾನಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಘಟನೆಗಳು ಸಾಮಾನ್ಯ ದಲಿತರು ಹಾಗೂ ಶೋಷಿತ ವರ್ಗದ ಜನರ ಸ್ಥಿತಿಗತಿಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತವೆ ಎಂದು ಅವರು ಹೇಳಿದ್ದಾರೆ.

ಜಾತಿ, ಧರ್ಮ ಅಥವಾ ಯಾವುದೇ ಕಾರಣಕ್ಕೂ ವ್ಯಕ್ತಿಯ ಆತ್ಮಗೌರವಕ್ಕೆ ಧಕ್ಕೆ ತರುವ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ. ಇಂತಹ ಕೃತ್ಯ ಎಸಗಿದವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಸಂವಿಧಾನದ ಆಶಯಗಳ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಸದಾ ಬದ್ಧವಾಗಿದೆ. ಸಮಾಜದಲ್ಲಿ ಜಾತಿ ತಾರತಮ್ಯ ಮತ್ತು ಅಸಮಾನತೆಯನ್ನು ನಿರ್ಮೂಲನೆ ಮಾಡಲು ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು ಎಂದು ಲತಾ ರಾಠೋಡ್ ಕರೆ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button