ಜಿಲ್ಲೆ ಸುದ್ದಿಯಾದಗಿರಿ

ಸರ್ಕಾರಿ ಉರ್ದು ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

ಕೆಂಭಾವಿ: ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮ ಹಾಗೂ ದೇಶಭಕ್ತಿ ವಾತಾವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ವತಿಯಿಂದ ಶಾಲೆಯ ಮುಖ್ಯಶಿಕ್ಷಕಿ ತಹೆಸೀನ್ ಬಿ. ನಾಲತವಾಡ ಅವರ ನಿಸ್ವಾರ್ಥ ಸೇವೆ ಹಾಗೂ ಶಾಲೆಯ ಅಭಿವೃದ್ಧಿಗೆ ಸಲ್ಲಿಸಿದ ಉತ್ತಮ ಕಾರ್ಯವನ್ನು ಗುರುತಿಸಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮುಖ್ಯಶಿಕ್ಷಕಿ ತಹೆಸೀನ್ ಬಿ. ನಾಲತವಾಡ, ‘ಈ ಸನ್ಮಾನವು ಇನ್ನಷ್ಟು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಲು ಪ್ರೇರಣೆ ನೀಡಿದೆ. ನಮ್ಮ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕೇವಲ ಅಕ್ಷರ ಕಲಿಸುವ ಕೇಂದ್ರವಲ್ಲ. ಉತ್ತಮ ಸಂಸ್ಕಾರ, ದೇಶಭಕ್ತಿ ಹಾಗೂ ಸೌಹಾರ್ದತೆಯನ್ನು ಬೆಳೆಸುವ ವಿದ್ಯಾದೇಗುಲವಾಗಿದೆ’ ಎಂದರು.

‘ಮಾತೃಭಾಷೆ ಉರ್ದುವಿನ ಜೊತೆಗೆ ರಾಜ್ಯ ಭಾಷೆ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿಯೂ ವಿದ್ಯಾರ್ಥಿಗಳು ಪ್ರಾವೀಣ್ಯತೆ ಪಡೆಯುವಂತೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪಠ್ಯದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಪರಿಸರ ಸಂರಕ್ಷಣೆಯಲ್ಲಿಯೂ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ’ ಎಂದು ಹೇಳಿದರು.

ಶಾಲೆಯ ಅಭಿವೃದ್ಧಿಗೆ ನಿರಂತರವಾಗಿ ಸಹಕರಿಸುತ್ತಿರುವ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಊರಿನ ಹಿರಿಯರು ಹಾಗೂ ಸಹೋದ್ಯೋಗಿ ಶಿಕ್ಷಕರಿಗೆ ಅವರು ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ಎಸ್‌ಡಿಎಂಸಿ ಸದಸ್ಯರು, ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button