ಕಲಬುರಗಿಜಿಲ್ಲೆ ಸುದ್ದಿ

ಕೃಷ್ಣೇ ಗೌಡನ ಆನೆ’ ನಾಟಕ ಪ್ರದರ್ಶನಕ್ಕೆ ಪ್ರೇಕ್ಷಕರ ಮೆಚ್ಚುಗೆ

ಕಲಬುರಗಿ: ರಂಗನಯನ ಸಾಂಸ್ಕೃತಿಕ ಸಂಸ್ಥೆ (ರಿ) ವತಿಯಿಂದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪ್ರಸಿದ್ಧ ಕಾದಂಬರಿ ಆಧಾರಿತ ‘ಕೃಷ್ಣೇ ಗೌಡನ ಆನೆ’ ನಾಟಕದ ಪ್ರದರ್ಶನ ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಯಶಸ್ವಿಯಾಗಿ ನಡೆಯಿತು.

ಎನ್.ವಿ. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ವಿಜಯಕುಮಾರ್ ಗೋತಗಿ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಶ್ರೀ ಗುರು ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಶಂಕರ ಬಾಳಿ ಅವರು ಕನ್ನಡ ಭಾಷೆ, ಸಾಹಿತ್ಯ ಹಾಗೂ ನಾಟಕ ಅಭಿನಯದ ಮಹತ್ವದ ಕುರಿತು ಮಾತನಾಡಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಚಿಮ್ಮಲಗಿ ಪಿಯು ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಸಂಗೀತ ಕುಲಕರ್ಣಿ, ಶಿವ ಪಿಯು ಕಾಲೇಜಿನ ಪ್ರಾಚಾರ್ಯ ಅರುಣ್ ಕುಮಾರ್ ಚವಾಣ್ ಹಾಗೂ ಡಿ.ಡಿ.ಯು. ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಲ್ಲೇಶ್ ಜಿ. ಉಪಸ್ಥಿತರಿದ್ದರು.

ರಂಗನಯನ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಅರವಿಂದ ಕುಲಕರ್ಣಿ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತೇಜಸ್ವಿ ಅವರ ಸಾಹಿತ್ಯದ ಆಶಯಗಳನ್ನು ರಂಗಭೂಮಿಯ ಮೂಲಕ ಕಟ್ಟಿಕೊಟ್ಟ ನಾಟಕ ಪ್ರದರ್ಶನವು ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಸಾಹಿತ್ಯ ಮತ್ತು ರಂಗಭೂಮಿಯ ಅಭಿಮಾನಿಗಳು ನಾಟಕವನ್ನು ಮೆಚ್ಚಿಕೊಂಡರು. ಗಣ್ಯರು, ಕಲಾವಿದರು, ಮಕ್ಕಳು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ರಂಗನಯನ ಸಾಂಸ್ಕೃತಿಕ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಆತ್ಮೀಯ ಸ್ವಾಗತ ಕೋರಿ, ನಾಟಕದ ಯಶಸ್ವಿ ಪ್ರದರ್ಶನಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Related Articles

Leave a Reply

Your email address will not be published. Required fields are marked *

Back to top button