ಕಲಬುರಗಿಜಿಲ್ಲೆ ಸುದ್ದಿ

29ರಿಂದ ಬಸವಾದಿ ಶರಣರ ವಚನಗಳ ಚಿತ್ರಕಲಾ ಪ್ರದರ್ಶನ

ಕಲಬುರಗಿ: ಬಸವಾದಿ ಶರಣರ ವಚನಗಳ ಆಳವಾದ ಅರ್ಥ ಹಾಗೂ ಕಾಯಕ–ದಾಸೋಹದ ತತ್ವಗಳನ್ನು ಚಿತ್ರಕಲೆಯ ಮೂಲಕ ಜನರಿಗೆ ಪರಿಚಯಿಸುವ ಅಪೂರ್ವ ಚಿತ್ರಕಲಾ ಪ್ರದರ್ಶನ ಆ.29ರಂದು ಬೆಳಿಗ್ಗೆ 11.30ಕ್ಕೆ ನಗರದ ಕನ್ನಡ ಭವನದ ಕಲಾ ಸೌಧದಲ್ಲಿ ನಡೆಯಲಿದೆ.

ಕಲಬುರಗಿ ವಿಭಾಗದ ಪ್ರಥಮ ವಚನ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಿರಿಯ ಚಿತ್ರಕಲಾವಿದ ಡಾ. ಎ.ಎಸ್. ಪಾಟೀಲ ಸಾರಥ್ಯದ ಶರಣ ಸಂಸ್ಕೃತಿ ದೃಶ್ಯಕಲಾ ಸಂಗ್ರಹಾಲಯ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಈ ಪ್ರದರ್ಶನ ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಶರಣರ ವಚನಗಳಲ್ಲಿನ ತಾತ್ವಿಕ ಸಂದೇಶ, ಕಾಯಕ ಮತ್ತು ದಾಸೋಹದ ಮಹತ್ವವನ್ನು ತಮ್ಮ ಕುಂಚದ ಮೂಲಕ ಚಿತ್ರಕಲಾವಿದ ಡಾ. ಎ.ಎಸ್. ಪಾಟೀಲ ಅವರು ದೃಶ್ಯರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ವಚನಗಳ ಆಶಯಕ್ಕೆ ಅನುಗುಣವಾಗಿ ಚಿತ್ರಗಳನ್ನು ರೂಪಿಸಲಾಗಿದ್ದು, ಪ್ರದರ್ಶನವು ವಚನ ಸಾಹಿತ್ಯದ ಸಂದೇಶವನ್ನು ದೃಶ್ಯಮಾಧ್ಯಮದ ಮೂಲಕ ಜನರಿಗೆ ತಲುಪಿಸುವ ಉದ್ದೇಶ ಹೊಂದಿದೆ.

ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಸಿದ್ದು ಪಾಟೀಲ ಅವರು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ರೈತಪರ ಹೋರಾಟಗಾರ ದಯಾನಂದ ಪಾಟೀಲ ಕಮಲಾನಗರ, ವಚನಪ್ರಿಯ ಜಗದೀಶ ಮರಪಳ್ಳಿ, ಮಹಿಳಾಪರ ಸಂಘಟಕಿ ಸರೋಜಿನಿ ಎಸ್. ಮಯೂರ್, ಕಲಾ ಸೌಧದ ಸಂಚಾಲಕ ಡಾ. ರೆಹಮಾನ್ ಪಟೇಲ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಂ. ಪಾಟೀಲ ಕಲ್ಲೂರ ಸೇರಿದಂತೆ ಗಣ್ಯರು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button