ಲೇಖನಗಳು

ಬದಲಾದರೆ ಭವಿಷ್ಯ, ಇಲ್ಲವಾದರೆ ವಿನಾಶ ಖಚಿತ

ಭಾಗ ೧

ಮನುಷ್ಯನ ಮನಸ್ಸು ಬಿಳಿ ಹಾಳೆಯಂತೆ. ಅದರ ಮೇಲೆ ಮೂಡುವ ಪ್ರತಿಯೊಂದು ಭಾವನೆ, ಅನುಭವ ಮತ್ತು ಆಲೋಚನೆಯೇ ಕ್ರಮೇಣ ಅವನ ವ್ಯಕ್ತಿತ್ವವನ್ನು ರೂಪಿಸುತ್ತದೆ. ನಾವು ನೇರ ನಡೆ-ನುಡಿ ಹೊಂದಿರುವವರು, ಪ್ರಾಮಾಣಿಕರು, ಮನಸ್ಸಿನಲ್ಲಿರುವುದನ್ನು ಮುಕ್ತವಾಗಿ ಮಾತನಾಡುವವರು ಎಂಬುದು ಗೊತ್ತಾದಾಗ ಕೆಲವರು ಅದನ್ನೇ ನಮ್ಮ ವಿರುದ್ಧದ ಅಸ್ತ್ರವನ್ನಾಗಿ ಬಳಸಲು ಪ್ರಯತ್ನಿಸುತ್ತಾರೆ.

ನಮ್ಮನ್ನು ನೇರವಾಗಿ ಎದುರಿಸಿ ಸೋಲಿಸಲು ಸಾಧ್ಯವಾಗದವರು, ನಮ್ಮ ಸುತ್ತಲಿರುವವರ ಮೂಲಕ ನಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳನ್ನು ಬಿತ್ತಲು ಆರಂಭಿಸುತ್ತಾರೆ. ಮೊದಲು ನಮಗೆ ಬೇಕಾದ ವ್ಯಕ್ತಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿಸುತ್ತಾರೆ. ನಂತರ ನಿಧಾನವಾಗಿ ಅವರ ಬಗ್ಗೆ ಕೆಟ್ಟ ವಿಚಾರಗಳನ್ನು ಹೇಳುತ್ತಾ ನಮ್ಮ ಮನಸ್ಸಿನಲ್ಲಿ ಅನುಮಾನ, ಅಪನಂಬಿಕೆ ಮತ್ತು ದ್ವೇಷದ ಬೀಜ ಬಿತ್ತುತ್ತಾರೆ. ಇದನ್ನೇ ಇಂದಿನ ಭಾಷೆಯಲ್ಲಿ ‘ಫೇಕ್ ನರೇಟಿವ್’ ಅಥವಾ ‘ಮೈಂಡ್ ಗೇಮ್’ ಎಂದು ಕರೆಯಬಹುದು. ಸರಳ ಕನ್ನಡದಲ್ಲಿ ಹೇಳುವುದಾದರೆ-ಇದು ಕುತಂತ್ರ ಮತ್ತು ಮನಸ್ಸಿನ ಮೇಲೆ ನಡೆಸುವ ಮೋಸದ ಆಟ.

ಇಂತಹವರು ನಮ್ಮಿಂದ ಯಾರಾದರೂ ವ್ಯಕ್ತಿಯ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಪಡೆಯಲು ಪ್ರಯತ್ನಿಸುತ್ತಾರೆ. ನಾವು ಮಾತನಾಡಿದ ಮಾತುಗಳನ್ನು ದಾಖಲಿಸಿಕೊಂಡು, ಅದನ್ನೇ ಸಂಬಂಧಪಟ್ಟ ವ್ಯಕ್ತಿಗೆ ತಲುಪಿಸಿ, ಇಬ್ಬರ ನಡುವಿನ ಸಂಬಂಧ ಹಳಸುವಂತೆ ಮಾಡುತ್ತಾರೆ. ಮುಖಾಮುಖಿಯಾಗಿ ಹೇಳಲಾಗದ ಮಾತುಗಳನ್ನು ದೂರವಾಣಿ ಕರೆಗಳ ಮೂಲಕ ಹೇಳಿಸಿ, ನಂತರ ಅದನ್ನೇ ನಮ್ಮ ವಿರುದ್ಧ ಬಳಸುವ ತಂತ್ರವೂ ಇದರ ಭಾಗವಾಗಿರಬಹುದು.

ಆದ್ದರಿಂದ ಇಂತಹ ವ್ಯಕ್ತಿಗಳೊಂದಿಗೆ ಅಗತ್ಯವಿರುವಷ್ಟು ಮಾತ್ರ ವ್ಯವಹರಿಸುವುದು ಒಳಿತು. ಅವರ ಮಾತುಗಳಿಗೆ ತಕ್ಷಣ ಪ್ರತಿಕ್ರಿಯಿಸುವ ಬದಲು, ಅವರ ಉದ್ದೇಶವೇನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸಾಧ್ಯವಾದರೆ ಅಂತಹವರಿಂದ ಅಂತರ ಕಾಯ್ದುಕೊಳ್ಳಬೇಕು. ಏಕೆಂದರೆ ವಿಷದ ಹನಿ ಒಂದೇ ಸಾಕು-ಶುದ್ಧ ನೀರನ್ನೂ ಕಲುಷಿತಗೊಳಿಸಲು.

ನಮ್ಮ ಎದುರಿಗೇ ಯಾರಾದರೂ ಬಂದು ಮತ್ತೊಬ್ಬರ ಬಗ್ಗೆ ಕೆಟ್ಟದಾಗಿ ಹೇಳಿದಾಗಲೂ ಎಚ್ಚರಿಕೆಯಿಂದ ಇರಬೇಕು. ಅಂತಹ ಮಾತುಗಳನ್ನು ಕೇಳಿ ತಕ್ಷಣ ನಂಬಬಾರದು. ಅಗತ್ಯವಿದ್ದರೆ ಸ್ಪಷ್ಟವಾಗಿ, “ಇಂತಹ ವಿಷಯಗಳನ್ನು ನನ್ನ ಮುಂದೆ ಇನ್ನು ಮುಂದೆ ಮಾತನಾಡಬೇಡಿ” ಎಂದು ಹೇಳಿ ಅಲ್ಲಿಗೇ ಮಾತು ಮುಗಿಸಬೇಕು. ಕೆಲವೊಮ್ಮೆ ಮೌನವೇ ಅತ್ಯುತ್ತಮ ಉತ್ತರ; ಇನ್ನೂ ಕೆಲ ಸಂದರ್ಭಗಳಲ್ಲಿ ನಿರ್ದಾಕ್ಷಿಣ್ಯವಾದ ನಿರಾಕರಣೆಯೇ ನಮ್ಮನ್ನು ಕಾಪಾಡುತ್ತದೆ.

ಇಂತಹ ಸಂದರ್ಭದಲ್ಲಿ ಬಸವಣ್ಣನವರ ವಚನಗಳು ನಮಗೆ ದಾರಿದೀಪವಾಗುತ್ತವೆ:

“ಹೊಯಿದವರೆನ್ನ ಹೊರೆದವರೆಂಬೆ,
ಬಯಿದವರೆನ್ನ ಬಂಧುಗಳೆಂಬೆ,
ನಿಂದಿಸಿದವರೆನ್ನ ತಂದೆತಾಯಿಗಳೆಂಬೆ,
ಆಳಿಗೊಂಡವರೆನ್ನ ಆಳ್ದವರೆಂಬೆ,
ಜರಿದವರೆನ್ನ ಜನ್ಮಬಂಧುಗಳೆಂಬೆ,
ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದರೆಂಬೆ,
ಕೂಡಲಸಂಗಮದೇವಾ…”

ಈ ವಚನದ ಒಳಾರ್ಥವನ್ನು ಅರಿತುಕೊಂಡಾಗ, ಹೊಗಳಿಕೆಯ ಹಿಂದೆ ಇರುವ ಉದ್ದೇಶವನ್ನೂ, ನಿಂದನೆಯ ಹಿಂದೆ ಇರುವ ಸತ್ಯವನ್ನೂ ಸಮಚಿತ್ತದಿಂದ ನೋಡುವ ಶಕ್ತಿ ಬರುತ್ತದೆ.

ನಾವು ಕೆಲಸ ಮಾಡುವ ಸಂಸ್ಥೆಯ ಬಗ್ಗೆ ಆಗಲಿ, ನಮ್ಮೊಂದಿಗೆ ಇರುವ ವ್ಯಕ್ತಿಗಳ ಬಗ್ಗೆ ಆಗಲಿ, ಅಥವಾ ಸಾರ್ವಜನಿಕ ಜೀವನದಲ್ಲಿ ನಾವು ನಂಬಿರುವ ಆತ್ಮೀಯರು ಹಾಗೂ ಗಣ್ಯರ ಬಗ್ಗೆ ಆಗಲಿ ಯಾರಾದರೂ ನಿರಂತರವಾಗಿ ಕೆಟ್ಟ ಅಭಿಪ್ರಾಯ ಮೂಡಿಸಲು ಪ್ರಯತ್ನಿಸಿದರೆ, ಅವರ ಮಾತುಗಳನ್ನು ಕುರುಡಾಗಿ ನಂಬಬಾರದು. ವ್ಯಕ್ತಿಯ ಬಗ್ಗೆ ಅಭಿಪ್ರಾಯ ರೂಪಿಸಿಕೊಳ್ಳುವ ಮೊದಲು ನಮ್ಮದೇ ಅನುಭವ, ವಿಚಾರ ಮತ್ತು ವಿವೇಚನೆಗೆ ಮಹತ್ವ ನೀಡಬೇಕು.

ನಮ್ಮ ಬಳಿಗೆ ಬರುವ ಪ್ರತಿಯೊಬ್ಬರ ಮಾತು, ನಡೆ, ಹಾವಭಾವ ಮತ್ತು ಪ್ರಶ್ನೆಗಳ ಹಿಂದಿರುವ ಉದ್ದೇಶವನ್ನು ಗಮನಿಸುವುದು ಅಗತ್ಯ. ಪ್ರತಿಯೊಂದು ಪ್ರಶ್ನೆಗೂ ತಕ್ಷಣ ಉತ್ತರಿಸುವ ಅವಶ್ಯಕತೆ ಇಲ್ಲ. ನಮಗೆ ಸಂಬಂಧಿಸಿದ ವಿಚಾರವಾಗಿದ್ದರೆ ಮಾತ್ರ ಉತ್ತರಿಸಬೇಕು. ಸಂಬಂಧವಿಲ್ಲದ ಅಥವಾ ಅನಗತ್ಯ ವಿಚಾರಗಳಲ್ಲಿ ಸಿಲುಕಿಕೊಳ್ಳದೆ, ಮಾತನ್ನು ಬೇರೆಡೆಗೆ ತಿರುಗಿಸುವುದು ಅಥವಾ ಅಲ್ಲಿಂದ ದೂರ ಸರಿಯುವುದೂ ಕೆಲವೊಮ್ಮೆ ಜಾಣ್ಮೆಯೇ.

ಇದನ್ನೇ ‘ಮೈಂಡ್ ಗೇಮ್’ ಎನ್ನಬಹುದು. ಯಾರನ್ನು ನೇರವಾಗಿ ಸೋಲಿಸಲು ಸಾಧ್ಯವಿಲ್ಲವೋ, ಅವರನ್ನು ನೇರವಾಗಿ ಎದುರಿಸುವ ಬದಲು ಅವರ ಸುತ್ತಲಿನ ಪರಿಸ್ಥಿತಿಯನ್ನು ಬದಲಿಸಿ ದುರ್ಬಲಗೊಳಿಸುವ ಪ್ರಯತ್ನವೇ ಈ ಕುತಂತ್ರದ ಒಂದು ರೂಪ. ಇತಿಹಾಸದಲ್ಲಿರುವ ‘ಟ್ರೋಜನ್ ಹಾರ್ಸ್’ ಉದಾಹರಣೆಯಂತೆ, ಅಪಾಯ ಯಾವಾಗಲೂ ಹೊರಗಿನಿಂದಲೇ ಬರುವುದಿಲ್ಲ; ಕೆಲವೊಮ್ಮೆ ಅದು ನಮ್ಮ ವಿಶ್ವಾಸದ ಬಾಗಿಲಿನಿಂದಲೇ ಒಳಗೆ ಬರುತ್ತದೆ.

ಒಬ್ಬ ವ್ಯಕ್ತಿಯ ಮನಸ್ಸನ್ನು ಗೊಂದಲಗೊಳಿಸಿದರೆ, ಆತನ ಆಲೋಚನಾ ಶಕ್ತಿಯನ್ನು ದುರ್ಬಲಗೊಳಿಸಿದರೆ, ಆತ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಅವನನ್ನು ಕೆಳಗೆಳೆಯುವುದು ಸುಲಭವಾಗುತ್ತದೆ. ಒಳ್ಳೆಯವನನ್ನು ತಪ್ಪು ದಾರಿಗೆ ಕೊಂಡೊಯ್ಯಲು ದೊಡ್ಡ ಶತ್ರುವಿನ ಅಗತ್ಯವಿಲ್ಲ; ಸಣ್ಣ ಅನುಮಾನ, ತಪ್ಪು ಮಾಹಿತಿ ಮತ್ತು ನಿರಂತರ ನಕಾರಾತ್ಮಕ ಪ್ರಚಾರವೇ ಸಾಕಾಗಬಹುದು.

ಆದ್ದರಿಂದ ಜೀವನದಲ್ಲಿ ಒಂದು ಸಂಗತಿಯನ್ನು ಸದಾ ನೆನಪಿಟ್ಟುಕೊಳ್ಳಬೇಕು-ನಮ್ಮ ಮನಸ್ಸಿನ ನಿಯಂತ್ರಣವನ್ನು ಮತ್ತೊಬ್ಬರ ಕೈಗೆ ಕೊಡಬಾರದು.

ಕೊನೆಯ ಮಾತು

ನಮ್ಮ ವಿರೋಧಿಗಳಾಗಲಿ, ನಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವವರಾಗಲಿ-ಅವರ ಬಗ್ಗೆ ಸದಾ ಗೌರವಯುತವಾಗಿ ಮತ್ತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವುದು ನಮ್ಮ ವ್ಯಕ್ತಿತ್ವದ ಎತ್ತರವನ್ನು ತೋರಿಸುತ್ತದೆ. ಭಿನ್ನಾಭಿಪ್ರಾಯ ಎಂದರೆ ಶತ್ರುತೆಯಲ್ಲ. ಇಂದಿನ ವಿರೋಧಿಯೇ ನಾಳೆಯ ಮಿತ್ರನಾಗಬಹುದು; ಇಂದಿನ ಭಿನ್ನಾಭಿಪ್ರಾಯವೇ ನಾಳೆಯ ಸಹಕಾರಕ್ಕೆ ಕಾರಣವಾಗಬಹುದು.

ಆದರೆ ಇಬ್ಬರ ನಡುವೆ ದೊಡ್ಡ ಕಂದಕ ನಿರ್ಮಾಣವಾಗಲು ನಾವು ಅವಕಾಶ ನೀಡಿದರೆ, ಅದನ್ನು ಮುಚ್ಚಲು ಇಡೀ ಜೀವನವೇ ಸಾಕಾಗದಿರಬಹುದು.

ಹೀಗಾಗಿ, ಮಾತಿನಲ್ಲಿ ಎಚ್ಚರ, ಸಂಬಂಧಗಳಲ್ಲಿ ವಿವೇಕ, ಮನಸ್ಸಿನಲ್ಲಿ ಸ್ವಚ್ಛತೆ ಮತ್ತು ನಿರ್ಧಾರಗಳಲ್ಲಿ ಸ್ವತಂತ್ರತೆ ಇರಲಿ.

ನಾವು ಬದಲಾದರೆ ಭವಿಷ್ಯ ನಿರ್ಮಾಣವಾಗುತ್ತದೆ; ಬದಲಾಗದೆ ಕುತಂತ್ರಗಳ ಬಲೆಗೆ ಸಿಲುಕಿದರೆ ವಿನಾಶ ಖಚಿತ.

ಭೀಮನಗೌಡ ಜಿ. ಪರಗೊಂಡ

Related Articles

Leave a Reply

Your email address will not be published. Required fields are marked *

Back to top button