ಸ್ವಾತಂತ್ರ್ಯ ಸಿಕ್ಕಿದ್ದು ತ್ಯಾಗ, ಬಲಿದಾನದಿಂದ: ಮಾರುತಿ ಗಂಜಗಿರಿ

ಕಲಬುರಗಿ: ರಾಷ್ಟ್ರಪ್ರೇಮಿಗಳ ಹಾಗೂ ಹಿರಿಯರ ಹೋರಾಟ, ತ್ಯಾಗ ಮತ್ತು ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಪ್ರತಿಯೊಬ್ಬರೂ ಸ್ವಾತಂತ್ರ್ಯದ ಮಹತ್ವವನ್ನು ಅರಿತು, ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ಮಾರುತಿ ಗಂಜಗಿರಿ ಹೇಳಿದರು.
ಚಂದಾಪುರ ಪಟ್ಟಣದ ಲಿಟಲ್ ಫ್ಲಾವರ್ ಶಾಲೆಯಲ್ಲಿ ಶನಿವಾರ ನಡೆದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ, ಸಮಾನತೆ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಮಹನೀಯರು ನಡೆಸಿದ ಹೋರಾಟ ನಮಗೆಲ್ಲರಿಗೂ ಮಾರ್ಗದರ್ಶಿಯಾಗಿದೆ ಎಂದರು.
ಸ್ವಾತಂತ್ರ್ಯ ಹೋರಾಟಗಾರರು ನಡೆಸಿದ ಹೋರಾಟದ ಇತಿಹಾಸವನ್ನು ವಿದ್ಯಾರ್ಥಿಗಳು ಹಾಗೂ ಯುವಜನರು ಅರಿತುಕೊಳ್ಳಬೇಕು. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾದರ್ ರಾಖೀ ಡಿಸೋಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಿಸ್ಟರ್ ಅರ್ಪೀತ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಭವಾನಿ ನಿರೂಪಿಸಿದರು. ಪ್ರಿಯಾಂಕ ಸ್ವಾಗತಿಸಿದರು. ಮಸೀಯಾ ವಂದಿಸಿದರು.

