ಯಾದಗಿರಿ

ಬ್ಯಾರೇಜ್‌ ಹಿನ್ನೀರಿನಿಂದ ಜಮೀನು ಜಲಾವೃತ: ಪರಿಹಾರಕ್ಕೆ ಉಮೇಶ್‌ ಮುದ್ನಾಳ್‌ ಆಗ್ರಹ

“ಈ ಬಾರಿ ಅಧಿಕಾರಿಗಳು ನೀಡಿರುವ ಭರವಸೆ ಕೇವಲ ಮಾತಿಗೆ ಸೀಮಿತವಾಗಬಾರದು. ಮಳೆಗಾಲ ಆರಂಭವಾಗಿರುವುದರಿ0ದ ಗೇಟ್ ನಿರ್ವಹಣೆ, ಹಿನ್ನೀರು ನಿಯಂತ್ರಣ, ತಡೆಗೋಡೆ ನಿರ್ಮಾಣ ಹಾಗೂ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕು. ಸಮಸ್ಯೆಗಳು ಬಗೆಹರಿಯದೆ ಮತ್ತೆ ಅವಘಡ ಸಂಭವಿಸಿದರೆ ಅದಕ್ಕೆ ಸಂಬ0ಧಿಸಿದ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ” ಎಂದು- ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ್ ಎಚ್ಚರಿಸಿದರು.

ಸೈದಾಪುರ: ಗುಡೂರು–ಜೋಳದಡಗಿ ಬ್ರಿಜ್‌ ಕಂ ಬ್ಯಾರೇಜ್‌ನ ಹಿನ್ನೀರಿನಿಂದ ಸುಮಾರು 35ರಿಂದ 40 ಎಕರೆ ಕೃಷಿ ಜಮೀನು ಜಲಾವೃತಗೊಂಡು ಭತ್ತದ ಬೆಳೆ, ಪಂಪ್‌ಸೆಟ್‌ ಹಾಗೂ ಕೃಷಿ ಉಪಕರಣಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರ ಉಮೇಶ್‌ ಕೆ. ಮುದ್ನಾಳ್‌ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು.

ರೈತರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದ ಬೆನ್ನಲ್ಲೇ ಕೆಬಿಜೆಎಲ್‌ನ ಎಇಇ ಲೋಹಿತ್‌ ಹಾಗೂ ಎಇ ಕನಕರೆಡ್ಡಿ ಸೋಮವಾರ ಸಂಜೆ ಬ್ಯಾರೇಜ್‌ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ರೈತರೊಂದಿಗೆ ಚರ್ಚಿಸಿ ಹಿನ್ನೀರಿನಿಂದ ಉಂಟಾಗಿರುವ ಸಮಸ್ಯೆ ಹಾಗೂ ಬ್ಯಾರೇಜ್‌ ಗೇಟ್‌ಗಳ ನಿರ್ವಹಣೆಯಲ್ಲಿನ ಲೋಪಗಳ ಕುರಿತು ಮಾಹಿತಿ ಪಡೆದರು.

ಮಳೆಗಾಲದಲ್ಲಿ ಬ್ಯಾರೇಜ್‌ ಗೇಟ್‌ಗಳ ನಿರ್ವಹಣೆಗೆ ಸ್ಥಳೀಯರನ್ನು ನೇಮಿಸಬೇಕು. ಪ್ರವಾಹ ಅಥವಾ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದಾಗ ಅಗತ್ಯಕ್ಕೆ ತಕ್ಕಂತೆ ನಡುಗೇಟ್‌ಗಳನ್ನು ತೆರೆಯುವ ವ್ಯವಸ್ಥೆ ಕಲ್ಪಿಸಬೇಕು ಎಂದು ಉಮೇಶ್‌ ಮುದ್ನಾಳ್‌ ಅಧಿಕಾರಿಗಳಿಗೆ ಒತ್ತಾಯಿಸಿದರು.

ಹಿನ್ನೀರಿನಿಂದ ಜಲಾವೃತಗೊಂಡಿರುವ ಜಮೀನುಗಳು ಹಾಗೂ ನೀರುಪಾಲಾದ ಮೋಟಾರ್‌ಗಳು ಮತ್ತು ಕೃಷಿ ಉಪಕರಣಗಳ ಹಾನಿಯ ಬಗ್ಗೆ ತಕ್ಷಣ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಬ್ಯಾರೇಜ್‌ ರಸ್ತೆಯ ಎರಡೂ ಬದಿಯ ಟ್ರ್ಯಾಕ್‌ಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ಮಣ್ಣು ಸಂಗ್ರಹವಾಗುತ್ತಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಟ್ರ್ಯಾಕ್‌ಗಳನ್ನು ಸ್ವಚ್ಛಗೊಳಿಸಿ ರಸ್ತೆಯಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಜೋಳದಡಗಿ ಹಾಗೂ ಗುಡೂರು ಭಾಗದಲ್ಲಿ ಪ್ರವಾಹದ ವೇಳೆ ಜಮೀನುಗಳಿಗೆ ನೀರು ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಬ್ಯಾರೇಜ್‌ನ ಎರಡೂ ಬದಿಗಳಲ್ಲಿ ತಡೆಗೋಡೆ ನಿರ್ಮಿಸಲು ಸರ್ಕಾರಕ್ಕೆ ತುರ್ತು ಪ್ರಸ್ತಾವನೆ ಸಲ್ಲಿಸಬೇಕು. ಹಿಂದಿನ ಪ್ರವಾಹದಲ್ಲಿ ಶಿಥಿಲಗೊಂಡಿರುವ ತಡೆಗೋಡೆಗಳನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿದರು.

ಬ್ಯಾರೇಜ್‌ನ ಮಧ್ಯಭಾಗದಲ್ಲಿರುವ ಐದು ಗೇಟ್‌ಗಳ ಎತ್ತರದಿಂದಾಗಿ ನೀರು ರಸ್ತೆಯ ಮೇಲೆ ಹರಿದು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿ, ಅಗತ್ಯವಿದ್ದಲ್ಲಿ ಗೇಟ್‌ಗಳ ಎತ್ತರವನ್ನು ಸುಮಾರು ಎರಡು ಅಡಿ ಕಡಿತಗೊಳಿಸುವ ಮೂಲಕ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಅಧಿಕಾರಿಗಳ ಭರವಸೆ

ರೈತರೊಂದಿಗೆ ಚರ್ಚಿಸಿದ ಎಇಇ ಲೋಹಿತ್‌ ಹಾಗೂ ಎಇ ಕನಕರೆಡ್ಡಿ, ರೈತರು ಮುಂದಿಟ್ಟಿರುವ ಸಮಸ್ಯೆ ಮತ್ತು ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ಮಳೆ ಹಾಗೂ ಪ್ರವಾಹದ ಸಂದರ್ಭದಲ್ಲಿ ರೈತರ ಜಮೀನುಗಳಿಗೆ ನೀರು ನುಗ್ಗದಂತೆ ಮುನ್ನೆಚ್ಚರಿಕೆ ವಹಿಸುವುದಾಗಿ ತಿಳಿಸಿದರು.

ಈ ಹಿಂದೆ ಬ್ಯಾರೇಜ್‌ ಗೇಟ್‌ಗಳನ್ನು ಸಮಯಕ್ಕೆ ಸರಿಯಾಗಿ ತೆರೆಯದ ಕಾರಣ 35ರಿಂದ 40 ಎಕರೆ ಜಮೀನು ಜಲಾವೃತಗೊಂಡು ಭತ್ತದ ಬೆಳೆ ಹಾಗೂ ಪಂಪ್‌ಸೆಟ್‌ಗಳಿಗೆ ಹಾನಿಯಾಗಿತ್ತು. ಈ ಹಿನ್ನೆಲೆಯಲ್ಲಿ ಉಮೇಶ್‌ ಮುದ್ನಾಳ್‌ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಅವರ ಮಧ್ಯಸ್ಥಿಕೆಯಿಂದ ಮೂರು ಗೇಟ್‌ಗಳನ್ನು ತೆರೆಯಲಾಗಿತ್ತು. ಇದೀಗ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಮರುಕಳಿಸದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿರುವುದು ರೈತರಲ್ಲಿ ಆಶಾಭಾವನೆ ಮೂಡಿಸಿದೆ.

ನಿಂಗಪ್ಪ ಸಿದ್ದಲಿಂಗಪ್ಪ ಸಾಬಣ್ಣ, ಮರೆಪ್ಪ, ಹಣಮಂತ, ಬಸಲಿಂಗಪ್ಪ, ದೇವಿಂದ್ರಪ್ಪ, ಖಾಜಾ ಪಟೇಲ, ದೇವಪ್ಪ ಪೂಜಾರಿ, ಆಂಜನೇಯ ಪೂಜಾರಿ, ಮಲ್ಲಿಕಾರ್ಜುನ, ಬಸವರಾಜ, ಪ್ರಭು, ಯಂಕಪ್ಪ, ಮೌನೇಶ್‌, ನರಸಪ್ಪ, ಮಲ್ಲಪ್ಪ, ಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button