ಕಲಬುರಗಿಜಿಲ್ಲೆ ಸುದ್ದಿ

ಆರೋಗ್ಯ ಜಾಗೃತಿಗೆ ‘ದಿ ವೆಲ್‌ನೆಸ್ ರೆವಲ್ಯೂಷನ್’ ಮ್ಯಾಗಝೀನ್

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಜನರಲ್ಲಿ ಆರೋಗ್ಯ ಕ್ಷೇಮ, ಯೋಗ ಹಾಗೂ ಸದೃಢ ಜೀವನಶೈಲಿಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ಮಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಪ್ರಕಟಿಸುತ್ತಿರುವ ‘ದಿ ವೆಲ್‌ನೆಸ್ ರೆವಲ್ಯೂಷನ್’ ಆರೋಗ್ಯ ಮತ್ತು ಕ್ಷೇಮ ಮ್ಯಾಗಝೀನ್‌ನ 5ನೇ ಸಂಚಿಕೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಶುಕ್ರವಾರ ಆಸ್ಪತ್ರೆ ಆವರಣದಲ್ಲಿ ಲೋಕಾರ್ಪಣೆಗೊಳಿಸಿದರು.

ಮ್ಯಾಗಝೀನ್ ವೀಕ್ಷಿಸಿದ ಸಚಿವರು, ಆರೋಗ್ಯ ಮತ್ತು ಕ್ಷೇಮದ ಕುರಿತು ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮಣೂರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕೈಗೊಂಡಿರುವ ಪ್ರಯತ್ನವನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆಸ್ಪತ್ರೆಯ ಮುಖ್ಯಸ್ಥ ಡಾ. ಫಾರುಕ್ ಅಹ್ಮದ್ ಮಣೂರ, ‘ಕಳೆದ ಐದು ವರ್ಷಗಳಿಂದ ಕಲ್ಯಾಣ ಕರ್ನಾಟಕ ಭಾಗದ ಜನರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಸ್ಪತ್ರೆಯ ತಂಡ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ’ ಎಂದರು.

ಉಚಿತ ಆರೋಗ್ಯ ತಪಾಸಣಾ ಶಿಬಿರಗಳು, ಟ್ರಾಮಾ ಡೇ ಸೇರಿದಂತೆ ವಿವಿಧ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನರಲ್ಲಿ ಆರೋಗ್ಯದ ಮಹತ್ವದ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಇದರ ಮುಂದುವರಿದ ಭಾಗವಾಗಿ ಆರೋಗ್ಯ ಕ್ಷೇಮ, ಯೋಗ ಹಾಗೂ ದೈಹಿಕ ಮತ್ತು ಮಾನಸಿಕ ಸದೃಢತೆಯ ಕುರಿತು ಜನರಿಗೆ ಹೆಚ್ಚಿನ ಮಾಹಿತಿ ಒದಗಿಸುವ ಉದ್ದೇಶದಿಂದ ‘ದಿ ವೆಲ್‌ನೆಸ್ ರೆವಲ್ಯೂಷನ್’ ಮ್ಯಾಗಝೀನ್ ಪ್ರಕಟಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಮತ್ತು ಕ್ಷೇಮದ ಕುರಿತು ಪ್ರಕಟವಾಗುತ್ತಿರುವ ಮೊದಲ ಮ್ಯಾಗಝೀನ್ ಇದಾಗಿದ್ದು, ಇದೀಗ 5ನೇ ಸಂಚಿಕೆ ಬಿಡುಗಡೆಯಾಗಿದೆ ಎಂದು ಹೇಳಿದರು.

ಮ್ಯಾಗಝೀನ್ ಅನ್ನು ಕಲ್ಯಾಣ ಕರ್ನಾಟಕದ ಪ್ರತಿಯೊಂದು ತಾಲ್ಲೂಕಿಗೂ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಡಾ. ಫಾರುಕ್ ಅಹ್ಮದ್ ಮಣೂರ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button