ಕಲ್ಯಾಣ ಕರ್ನಾಟಕ ಉತ್ಸವ ಕಾಟಾಚಾರಕ್ಕೆ: ಕೆಂಭಾವಿ ಪುರಸಭೆ ವಿರುದ್ಧ ಆಕ್ರೋಶ
ಜನಪ್ರತಿನಿಧಿಗಳ ಗೈರು; ಅಧಿಕೃತ ನೋಟಿಸ್ ನೀಡದ ಆರೋಪ

ಕೆಂಭಾವಿ: ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಕೆಂಭಾವಿ ಪುರಸಭೆಯಲ್ಲಿ ಕಾಟಾಚಾರಕ್ಕೆ ಆಚರಿಸಲಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಹಾಗೂ ಪುರಸಭೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
1947ರ ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ದೊರೆತರೂ, ನಿಜಾಮನ ಆಳ್ವಿಕೆಯಲ್ಲಿದ್ದ ಕಲ್ಯಾಣ ಕರ್ನಾಟಕ ಪ್ರದೇಶವು 1948ರ ಸೆಪ್ಟೆಂಬರ್ 17ರಂದು ವಿಮೋಚನೆಗೊಂಡಿತು. ಈ ಹಿನ್ನೆಲೆಯಲ್ಲಿ ಸೆ.17ರಂದು ಕಲ್ಯಾಣ ಕರ್ನಾಟಕ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ಹಾಗೂ ಜಿಲ್ಲಾಡಳಿತ ಸೂಚನೆ ನೀಡಿದ್ದರೂ, ಕೆಂಭಾವಿ ಪುರಸಭೆಯಲ್ಲಿ ಅಗತ್ಯ ಪೂರ್ವಸಿದ್ಧತೆ ನಡೆಸಿರಲಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಪುರಸಭೆ ಆವರಣದಲ್ಲಿ ಯಾವುದೇ ವಿಶೇಷ ಅಲಂಕಾರ ಅಥವಾ ಸಾರ್ವಜನಿಕ ಕಾರ್ಯಕ್ರಮದ ವಾತಾವರಣ ಕಂಡುಬರಲಿಲ್ಲ. ತರಾತುರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮ ಮುಕ್ತಾಯಗೊಳಿಸಲಾಗಿದೆ. ಅಧಿಕಾರಿಗಳಿಂದ ಸೂಕ್ತ ಮಾಹಿತಿ ನೀಡದ ಕಾರಣ ಬಹುತೇಕ ಚುನಾಯಿತ ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಗೈರಾಗಿದ್ದರು ಎಂದು ಸದಸ್ಯರು ಆರೋಪಿಸಿದ್ದಾರೆ.
ಸದಸ್ಯರಿಗೆ ನೋಟಿಸ್ ನೀಡದ ಆರೋಪ
ವಿಮೋಚನಾ ಹೋರಾಟದಲ್ಲಿ ತ್ಯಾಗ, ಬಲಿದಾನ ಮಾಡಿದ ಮಹನೀಯರನ್ನು ಸ್ಮರಿಸುವ ಐತಿಹಾಸಿಕ ಕಾರ್ಯಕ್ರಮದ ಕುರಿತು ಪುರಸಭೆಯ ಚುನಾಯಿತ ಸದಸ್ಯರಿಗೆ ಯಾವುದೇ ಅಧಿಕೃತ ನೋಟಿಸ್ ಅಥವಾ ಮುನ್ಸೂಚನೆ ನೀಡಿಲ್ಲ ಎಂದು ಸದಸ್ಯರು ಆಕ್ಷೇಪಿಸಿದ್ದಾರೆ. ಅಧಿಕಾರಿಗಳ ಏಕಪಕ್ಷೀಯ ಧೋರಣೆಯಿಂದಲೇ ಜನಪ್ರತಿನಿಧಿಗಳ ಗೈರುಹಾಜರಿ ಉಂಟಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಐತಿಹಾಸಿಕ ಮಹತ್ವವುಳ್ಳ ದಿನಾಚರಣೆಯನ್ನು ಕೇವಲ ಕಚೇರಿ ದಾಖಲೆ ಹಾಗೂ ಫೋಟೋಗಳಿಗೆ ಸೀಮಿತಗೊಳಿಸಿರುವುದು ಖಂಡನೀಯ. ಈ ಕುರಿತು ಜಿಲ್ಲಾಡಳಿತ ಹಾಗೂ ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿ, ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಾಗರಿಕರು ಹಾಗೂ ಪುರಸಭೆ ಸದಸ್ಯರು ಆಗ್ರಹಿಸಿದ್ದಾರೆ.



