ಕಲಬುರಗಿರಾಜ್ಯ

ಹಾಸ್ಟೆಲ್ ಆಡಳಿತಗಾರನ ವಿರುದ್ಧ ಲೈಂಗಿಕ ಕಿರುಕುಳ, ಬೆದರಿಕೆ ಆರೋಪ: ಪ್ರಕರಣ ದಾಖಲು

“ಮಹಿಳೆಯರಿಗೆ ಸುರಕ್ಷತೆ ಹಾಗೂ ಗೌರವಯುತ ಬದುಕಿನ ವಾತಾವರಣ ಕಲ್ಪಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಬೇಕು. ಆದರೆ, ಸರ್ಕಾರದ ಅನುದಾನ ಪಡೆದು ನಡೆಸುವ ಹಾಸ್ಟೆಲ್‌ನಲ್ಲಿ ಆಶ್ರಯ ಪಡೆದ ಮಹಿಳೆಯರಿಗೇ ಕಿರುಕುಳ ನೀಡಲಾಗಿದೆ ಎಂಬ ಆರೋಪ ಅತ್ಯಂತ ಗಂಭೀರವಾಗಿದೆ. ಇಂತಹ ಪ್ರಕರಣಗಳಲ್ಲಿ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಆರೋಪಿತ ಹಾಸ್ಟೆಲ್‌ಗೆ ಸರ್ಕಾರ ನೀಡುತ್ತಿರುವ ಎಲ್ಲ ರೀತಿಯ ಅನುದಾನವನ್ನು ಕೂಡಲೇ ಸ್ಥಗಿತಗೊಳಿಸಬೇಕು. ನೊಂದ ಮಹಿಳೆಗೆ ನ್ಯಾಯ ದೊರಕುವಂತೆ ಜಿಲ್ಲಾಡಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕುರಿತು ಮಹಿಳಾ ಆಯೋಗಕ್ಕೂ ದೂರು ಸಲ್ಲಿಸಲಾಗುವುದು.”-ಜಯಶ್ರೀ ಕಟ್ಟಿಮನಿ, ರಾಜ್ಯ ಕಾರ್ಯದರ್ಶಿ, ಅಹಿಂದ ಜನ ಸಂಘ

ಕಲಬುರಗಿ: ಸರ್ಕಾರಿ ಅನುದಾನಿತ ಹಾಸ್ಟೆಲ್‌ನಲ್ಲಿ ಆಶ್ರಯ ಪಡೆದಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ ಆರೋಪದ ಮೇರೆಗೆ ಹಾಸ್ಟೆಲ್ ಮಾಲೀಕ ಹಾಗೂ ಆಡಳಿತಗಾರನ ವಿರುದ್ಧ ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಂಚೋಳಿ ಕ್ರಾಸ್‌ನಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅನುದಾನಿತ ಮಹಾದೇವಿ ತಾಯಿ ಶಕ್ತಿ ಸದನ ಗೃಹ ಹಾಸ್ಟೆಲ್‌ನ ಮಾಲೀಕ ಹಾಗೂ ಆಡಳಿತಗಾರ ಅನಂತರಾಜು ವಿರುದ್ಧ ಅಫಜಲಪುರ ತಾಲ್ಲೂಕಿನ ಗ್ರಾಮದ ಮಹಿಳೆಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ಏಪ್ರಿಲ್‌ 1ರಂದು ಆಶ್ರಯಕ್ಕಾಗಿ ಹಾಸ್ಟೆಲ್‌ಗೆ ಬಂದಿದ್ದರು. ಈ ಸಂದರ್ಭದಲ್ಲಿ ಆಡಳಿತಗಾರ ಅನಂತರಾಜು ಹಲವು ಬಾರಿ ಅಸಭ್ಯವಾಗಿ ಮಾತನಾಡಿ ಕಿರುಕುಳ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸೆಪ್ಟೆಂಬರ್‌ 17ರಂದು ರಾತ್ರಿ ಸುಮಾರು 7.30ಕ್ಕೆ ಅಸಭ್ಯವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೂದಲು ಹಿಡಿದು ಎಳೆದಾಡಿ ಹಾಸ್ಟೆಲ್‌ನಿಂದ ಹೊರಗೆ ಹಾಕಿದ್ದಾರೆ. ಅಲ್ಲದೆ, ಹಲವು ಬಾರಿ ಲೈಂಗಿಕ ಉದ್ದೇಶದ ಮಾತುಗಳನ್ನು ಆಡಿದ್ದು, ತನ್ನ ಮಾತಿನಂತೆ ನಡೆದುಕೊಳ್ಳದಿದ್ದರೆ ಹಾಸ್ಟೆಲ್‌ನಿಂದ ಹೊರಗೆ ಕಳುಹಿಸುವುದಾಗಿ ಹಾಗೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಹಾಸ್ಟೆಲ್ ವಾರ್ಡನ್ ಕಾಶೀಬಾಯಿ ಅವರಿಗೆ ಹಲವು ಬಾರಿ ಮಾಹಿತಿ ನೀಡಿದ್ದಾಗಿ ಮಹಿಳೆ ಹೇಳಿದ್ದಾರೆ. ಸೆಪ್ಟೆಂಬರ್‌ 26ರಂದು ಸಂಜೆ 7.30ರ ಸುಮಾರಿಗೆ ಕಾಶೀಬಾಯಿ ಅವರು ವಿಷಯವನ್ನು ಅನಂತರಾಜು ಅವರ ಗಮನಕ್ಕೆ ತಂದಾಗ, ಅವರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ವಿಷಯದಲ್ಲಿ ಮಧ್ಯಪ್ರವೇಶಿಸದಂತೆ ಬೆದರಿಕೆ ಹಾಕಿ ಹಾಸ್ಟೆಲ್‌ನಿಂದ ಹೊರಗೆ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆಡಳಿತಗಾರರು ಜವಾಬ್ದಾರಿಯುತ ಹುದ್ದೆಯಲ್ಲಿದ್ದು, ಮಹಿಳೆಯರೊಂದಿಗೆ ಈ ರೀತಿಯಾಗಿ ವರ್ತಿಸಿರುವ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಹಾಸ್ಟೆಲ್‌ನ ಪರವಾನಗಿ ರದ್ದುಪಡಿಸಬೇಕು ಎಂದು ದೂರುದಾರರು ಮನವಿ ಮಾಡಿದ್ದಾರೆ.

ಯೋಜನೆಗಳ ಸೌಲಭ್ಯ ನೀಡದಂತೆ ಆಗ್ರಹ

ಆರೋಪ ಕೇಳಿಬಂದಿರುವ ಹಾಸ್ಟೆಲ್‌ಗಳಿಗೆ ಸರ್ಕಾರದಿಂದ ನೀಡುವ ‘ಅನುಪಾಲನಾ ಗೃಹ’ ಸೇರಿದಂತೆ ಇತರೆ ಯಾವುದೇ ಯೋಜನೆಗಳ ಸೌಲಭ್ಯ ನೀಡಬಾರದು ಎಂದು ಸಾಮಾಜಿಕ ಹೋರಾಟಗಾರ್ತಿ ಜಯಶ್ರೀ ಕಟ್ಟಿಮನಿ ಒತ್ತಾಯಿಸಿದ್ದಾರೆ.

ಈ ಕುರಿತು ಕಲಬುರಗಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button