ಶರಣರ ವಚನಗಳು ಹೊಸ ಪೀಳಿಗೆಗೆ ದಾರಿದೀಪ: ಡಾ. ಕೆ.ಎಸ್. ನಾಯಕ

ಕಲಬುರಗಿ: ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಕಲ್ಯಾಣ ಕ್ರಾಂತಿ ಹಾಗೂ ಶರಣರ ವೈಚಾರಿಕತೆ ಕೇವಲ ಆ ಕಾಲಕ್ಕೆ ಸೀಮಿತವಾಗಿಲ್ಲ. ಇಂದಿನ ಹೊಸ ಪೀಳಿಗೆಗೂ ದಾರಿದೀಪವಾಗಿದೆ ಎಂದು ಹಿರಿಯ ಸಾಹಿತಿ ಡಾ. ಕೆ.ಎಸ್. ನಾಯಕ ಹೇಳಿದರು.
ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಭಾನುವಾರ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ 13ನೇ ವರ್ಷಾಚರಣೆ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ ಆಯೋಜಿಸಿದ್ದ ‘ವಿಶ್ವ ವೈಚಾರಿಕ ದರ್ಶನ’ದಂತಿರುವ ಶರಣತತ್ವ ಚಿಂತನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಕೆಲಸ ಕೀಳಲ್ಲ. ಪ್ರತಿಯೊಬ್ಬರೂ ಶ್ರಮಪಟ್ಟು ದುಡಿಯಬೇಕು ಎಂಬುದು ಶರಣರ ತತ್ವವಾಗಿದೆ. ನಮ್ಮಲ್ಲಿರುವ ಸ್ವಾರ್ಥವನ್ನು ಬಿಟ್ಟು ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸಿಕೊಳ್ಳಬೇಕು. ಸಮಾಜದಲ್ಲಿ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಸಮಾವೇಶಗಳ ಸರದಾರರಾಗಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಿದರು.
ವಚನಗಳ ಮೌಲ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಬಸವಾದಿ ಶರಣರು ಯಾವುದೇ ಒಂದು ಜಾತಿ ಅಥವಾ ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಎಲ್ಲ ಎಲ್ಲೆಯನ್ನು ಮೀರಿದವರು. ಸಮಾಜದ ಪರಿವರ್ತನೆಗೆ ಅವರ ವಚನಗಳು ದಿವ್ಯ ಔಷಧಿಯಂತಿವೆ ಎಂದರು.
ಶರಣರ ವಚನಗಳಲ್ಲಿರುವ ಮೌಲ್ಯಗಳನ್ನು ಅರಿತುಕೊಳ್ಳಲು ಅವುಗಳನ್ನು ಅಧ್ಯಯನ ಮಾಡಬೇಕು. ವಚನಗಳನ್ನು ಕಂಠಪಾಠ ಮಾಡುವುದರ ಜತೆಗೆ ಅವುಗಳ ಆಶಯದಂತೆ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಶರಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವರ ಚಿಂತನೆಗಳಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಮಾಜಿ ಮೇಯರ್ ವರ್ಷಾ ರಾಜೀವ್ ಜಾನೆ, ಸಾಹಿತಿಗಳಾದ ಡಾ. ಜಗನ್ನಾಥ ತರನಳ್ಳಿ, ಮುಡುಬಿ ಗುಂಡೇರಾವ, ಹಿರಿಯ ಪತ್ರಕರ್ತ ಕಾಶೀನಾಥ ಗುತ್ತೇದಾರ ಚಿತ್ತಾಪುರ, ಅಕಾಡೆಮಿ ಅಧ್ಯಕ್ಷ ಬಿ.ಎಂ. ಪಾಟೀಲ ಕಲ್ಲೂರು, ಪೂಜಾ ಬಂಕಲಗಿ ಮಾತನಾಡಿದರು.
ಜಿಲ್ಲಾ ಕಸಾಪದ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಸೈಯ್ಯದ್ ನಜೀರುದ್ದೀನ್ ಮುಂತಾದವರು ವೇದಿಕೆಯಲ್ಲಿದ್ದರು.
ಶರಣ ದಂಪತಿಗಳಿಗೆ ಗೌರವ
ಸಮಾರಂಭದಲ್ಲಿ ಶರಣ ದಂಪತಿಗಳಾದ ಕಾವೇರಿ ಡಾ. ಶರಣಬಸಪ್ಪ ಕಾರಭಾರಿ, ಭಾಗ್ಯಶ್ರೀ ಹನುಮಗೌಡ, ಜ್ಯೋತಿ ಲಕ್ಷ್ಮೀ ಸಂಜುಶೆಟ್ಟಿ, ಗಿರಿಜಾ ರುದ್ರಗೌಡ ಪಾಟೀಲ, ಸಂಗೀತಾ ಚಂದ್ರಶೆಟ್ಟಿ ಕಾಡಾದಿ, ಸುಷ್ಮಾವತಿ ಡಾ. ಶರಣು ಹೊನ್ನೆಗೆಜ್ಜೆ, ನೀಲಮ್ಮ ಸುನೀಲ ವಾಡಿ ಹಾಗೂ ಸಂಗಮ್ಯಾ ರೇವಣಸಿದ್ದಯ್ಯ ಮಠ ಅವರನ್ನು ‘ದಂಪತಿ ದರ್ಪಣ ಗೌರವ ಪುರಸ್ಕಾರ’ ನೀಡಿ ಸತ್ಕರಿಸಲಾಯಿತು.
ಇದೇ ವೇಳೆ ತಮ್ಮ ಕಾಯಕದ ಜತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಹೇಶಕುಮಾರ ಭಾವಿಕಟ್ಟಿ, ಜಗನ್ನಾಥ ಬಂಡಿ, ಜೈದೀಪ್ ಅಡವಿರಾಜ ಕೊಡ್ಲಿ, ಗುರುಬಸಪ್ಪ ಪಾಟೀಲ, ಪಂಡಿತ ಗೋವಿಂದ ಸರಸಂಬಾ, ಸಿದ್ಧಲಿಂಗೇಶ್ವರ ಕೊನೆಕ್, ಶಿವರಾಜ ಮಾಲಿಪಾಟೀಲ ತೇಗಲತಿಪ್ಪಿ, ಶಾಂತಾಬಾಯಿ ಹಿರೇಮಠ, ಡಾ. ಮಾಲಿನಿ ಡೇರೆದ, ಭಾಗ್ಯಶ್ರೀ ಪಾಟೀಲ ಕಲ್ಲಹಂಗರಗಾ, ಮಲ್ಲಿಕಾರ್ಜುನ ನೆಲೂರು, ಎ.ಆರ್. ದತ್ತಾ, ಅಮರೇಶ್ವರ ನೂಲಾ, ನಾಗೇಂದ್ರಪ್ಪ ದಂಡೋತಿಕರ್ ಹಾಗೂ ರಾಜೇಂದ್ರ ಮಾನೇ ಅವರನ್ನು ‘ಕಾಯಕ ರತ್ನ ಗೌರವ ಪುರಸ್ಕಾರ’ ನೀಡಿ ಸತ್ಕರಿಸಲಾಯಿತು.



