ಕಲಬುರಗಿಜಿಲ್ಲೆ ಸುದ್ದಿ

ಸಫಾಯಿ ಕರ್ಮಚಾರಿ ಕುಟುಂಬಗಳಿಗೆ ₹60 ಲಕ್ಷ ಪರಿಹಾರ

ಕಲಬುರಗಿ: ದಕ್ಷಿಣ ಮತಕ್ಷೇತ್ರದ ಭೀಮಹಳ್ಳಿ ಗ್ರಾಮದಲ್ಲಿ ನಡೆದ ‘ಪ್ರಜಾಸೇವಾ ಜನಸ್ಪಂದನ’ ಕಾರ್ಯಕ್ರಮದಲ್ಲಿ, ಶೌಚಗುಂಡಿ ಸ್ವಚ್ಛಗೊಳಿಸುವ ವೇಳೆ ಮೃತಪಟ್ಟ ಇಬ್ಬರು ಸಫಾಯಿ ಕರ್ಮಚಾರಿಗಳ ಕುಟುಂಬದ ಅವಲಂಬಿತರಿಗೆ ತಲಾ ₹30 ಲಕ್ಷದಂತೆ ಒಟ್ಟು ₹60 ಲಕ್ಷ ಪರಿಹಾರದ ಚೆಕ್‌ಗಳನ್ನು ಶಾಸಕ ಅಲ್ಲಮಪ್ರಭು ಪಾಟೀಲ ವಿತರಿಸಿದರು.

ಭೀಮಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಾಪುರ ರೈಲ್ವೆ ಗೇಟ್ ಸಮೀಪದ ಮಾದರಸನಹಳ್ಳಿ ಗ್ರಾಮದಲ್ಲಿ 2026ರ ಫೆಬ್ರುವರಿ 18ರಂದು ಮನೆಯ ಶೌಚಗುಂಡಿ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಉಸಿರುಗಟ್ಟಿ ರತ್ನ ಭುಜಂಗರಾವ್ ಹೊಟ್ಕರ್ ಹಾಗೂ ಶಿವಕುಮಾರ ತಂದೆ ಕಾಶೀನಾಥ ನಂದೂರ್ಕರ್ ಮೃತಪಟ್ಟಿದ್ದರು.

ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಆದೇಶದಂತೆ ಮೃತರ ಕುಟುಂಬಗಳಿಗೆ ಪರಿಹಾರಧನ ಮಂಜೂರಾಗಿದ್ದು, ಅದರಂತೆ ಪರಿಹಾರದ ಚೆಕ್‌ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅಲ್ಲಮಪ್ರಭು ಪಾಟೀಲ, ಸಫಾಯಿ ಕರ್ಮಚಾರಿಗಳು ಕೆಲಸ ಮಾಡುವ ವೇಳೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಶೌಚಗುಂಡಿಯೊಳಗೆ ಇಳಿಯುವ ಸಂದರ್ಭದಲ್ಲಿ ಕಡ್ಡಾಯವಾಗಿ ರಕ್ಷಣಾ ಸಾಧನಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.

ಮೃತರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡುವ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಕಾರ್ಮಿಕ ಮುಖಂಡ ಸುನಿಲ್ ಮಾರುತಿ ಮಾನಪಡೆ, ತಹಶೀಲ್ದಾರ್ ಆನಂದ ಶೀಲ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸಂತೋಷ ಪಾಟೀಲ ಧಣ್ಣೂರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ಕಣ್ಣಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಭಾರತಿ ಮಣ್ಣೂರೆ ಹಾಗೂ ನಾಗರಾಜ ಬಂಗೂರು ಸೇರಿದಂತೆ ಮೃತರ ಕುಟುಂಬದ ಸದಸ್ಯರಾದ ರಾಧಾಬಾಯಿ ರತ್ನ ಹೊಟ್ಕರ್, ಸತೀಶ, ಶಿವಕುಮಾರ ನಂದೂರ್ಕರ್, ಅವಿನಾಶ್ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button