ಚಿಟ್ಟೆಗಳ ಸಂರಕ್ಷಣೆಗೆ ಜಾಗೃತಿ ಅಗತ್ಯ: ವಿಜಯಕುಮಾರ್ ಬಡಿಗೇರ್

ಚಿತ್ತಾಪುರ: ಚಿಟ್ಟೆಗಳು ಪ್ರಕೃತಿಯ ಸೌಂದರ್ಯದ ಪ್ರತೀಕವಾಗಿದ್ದು, ಪರಿಸರ ಸಮತೋಲನ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಚಿತ್ತಾಪುರ ಪ್ರಾದೇಶಿಕ ಅರಣ್ಯ ವಲಯಾಧಿಕಾರಿ ವಿಜಯಕುಮಾರ್ ಬಡಿಗೇರ್ ಹೇಳಿದರು.
ತಾಲ್ಲೂಕಿನ ಗುಂಡಗುರ್ತಿಯ ಲುಂಬಿನಿ ಚಿಟ್ಟೆ ಪಾರ್ಕ್ನಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಶರಣಬಸವೇಶ್ವರ ಕಾಲೇಜ್ ಆಫ್ ಸೈನ್ಸ್ ಹಾಗೂ ಕಲಬುರಗಿ ಪ್ರಾದೇಶಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಚಿಟ್ಟೆಗಳ ವೀಕ್ಷಣೆ ಹಾಗೂ ಸಂರಕ್ಷಣೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಿಟ್ಟೆಗಳು ಕೇವಲ ಸೌಂದರ್ಯಕ್ಕೆ ಸೀಮಿತವಾಗಿಲ್ಲ. ಅವು ಸಸ್ಯಗಳು ಮತ್ತು ಬೆಳೆಗಳ ಪರಾಗಸ್ಪರ್ಶಕ್ಕೆ ನೆರವಾಗುವ ಪ್ರಮುಖ ಜೀವಿಗಳಾಗಿದ್ದು, ಪರಿಸರದ ಆರೋಗ್ಯದ ಸೂಚಕಗಳೂ ಆಗಿವೆ. ಇತ್ತೀಚಿನ ದಿನಗಳಲ್ಲಿ ಚಿಟ್ಟೆಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.
ಚಿಟ್ಟೆಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮನೆ, ಶಾಲೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಚಿಟ್ಟೆಗಳಿಗೆ ಅನುಕೂಲವಾಗುವ ವಿವಿಧ ಬಗೆಯ ಸಸ್ಯಗಳನ್ನು ಬೆಳೆಸಬೇಕು. ಕೃಷಿಯಲ್ಲಿ ರಾಸಾಯನಿಕಗಳ ಅತಿಯಾದ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಚಿಟ್ಟೆಗಳ ಆವಾಸಸ್ಥಾನವನ್ನು ಸಂರಕ್ಷಿಸಬೇಕು ಎಂದು ಅವರು ಸಲಹೆ ನೀಡಿದರು.
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಲ್ಲಿ ಚಿಟ್ಟೆಗಳ ಮಹತ್ವ ಮತ್ತು ಸಂರಕ್ಷಣೆಯ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಸಿಎಫ್ ಸುನಿಲ್ ಕುಮಾರ್ ಚವಾಣ್, ಡಿಆರ್ಎಫ್ಒ ಅನಿಲ್ ಕುಮಾರ್, ಬೀಟ್ ಫಾರೆಸ್ಟರ್ ಶ್ರೀಕಾಂತ್ ಹಾಗೂ ಅರಣ್ಯ ಸಿಬ್ಬಂದಿಗಳಾದ ನಾಗೇಶ್, ಸಿದ್ದು, ಜಾಫರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



