ಸಾವಿರ ಮನೆ ಹಸ್ತಾಂತರವಾದರೂ ಮೂಲಸೌಕರ್ಯವಿಲ್ಲ: ನಿವಾಸಿಗಳ ಆಕ್ರೋಶ

ಚಿತ್ತಾಪುರ: ಪಟ್ಟಣದ ದಿಗ್ಗಾಂವ ಹಾಗೂ ಸಾತನೂರ ರಸ್ತೆಯಲ್ಲಿರುವ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವಸತಿ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಹೋರಾಟ ಸಮಿತಿ ಮುಖಂಡರು ಸೋಮವಾರ ಪುರಸಭೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಲಾಗಿರುವ ಮನೆಗಳಲ್ಲಿ ಈಗಾಗಲೇ ನೂರಾರು ಕುಟುಂಬಗಳು ವಾಸಿಸುತ್ತಿದ್ದು, ಮೂಲಸೌಕರ್ಯಗಳ ಕೊರತೆಯಿಂದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಫೆಬ್ರುವರಿ 27ರಂದು ಸುಮಾರು ಒಂದು ಸಾವಿರ ಮನೆಗಳನ್ನು ಪುರಸಭೆಗೆ ಹಸ್ತಾಂತರಿಸಿದ್ದರೂ, ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನಿವಾಸಿಗಳು ದೂರಿದರು.
ಸಾತನೂರ ರಸ್ತೆ ಮುಖ್ಯದ್ವಾರದ ಬಲಭಾಗದಲ್ಲಿರುವ ನಾಲ್ಕು ವಿದ್ಯುತ್ ಕಂಬಗಳಿಗೆ ಬಲ್ಬ್ ಅಳವಡಿಸದಿರುವುದರಿಂದ ರಾತ್ರಿ ವೇಳೆ ತೊಂದರೆಯಾಗುತ್ತಿದೆ. ಕಸ ವಿಲೇವಾರಿ ವ್ಯವಸ್ಥೆ ಸಮರ್ಪಕವಾಗಿಲ್ಲ. ವಸತಿ ಪ್ರದೇಶದ ಸುತ್ತಮುತ್ತ ಗಿಡಗಂಟಿಗಳು ಬೆಳೆದಿದ್ದು, ಕುಡಿಯುವ ನೀರಿನ ಪೈಪ್ ಕೂಡ ಒಡೆದುಹೋಗಿದೆ ಎಂದು ಅವರು ಹೇಳಿದರು.
ಬೇಡಿಕೆಗಳೇನು?
ವಿದ್ಯುತ್ ಕಂಬಗಳಿಗೆ ಕೂಡಲೇ ಬಲ್ಬ್ ಅಳವಡಿಸಬೇಕು. ನಿತ್ಯ ಕಸ ವಿಲೇವಾರಿ ವಾಹನ ಕಳುಹಿಸಬೇಕು. ಗಿಡಗಂಟಿಗಳನ್ನು ತೆರವುಗೊಳಿಸಬೇಕು. ಪ್ರತಿ ಬ್ಲಾಕ್ಗೆ (ಎಂಟು ಕುಟುಂಬಗಳಿಗೆ ಒಂದರಂತೆ) ಕಸದ ಡಬ್ಬಿ ಒದಗಿಸಬೇಕು. ಸಮರ್ಪಕ ನೀರು ಪೂರೈಕೆಗಾಗಿ ಪಂಪ್ ಆಪರೇಟರ್ ನೇಮಿಸಿ, ಹಾನಿಗೊಂಡಿರುವ ನೀರಿನ ಪೈಪ್ಗಳನ್ನು ದುರಸ್ತಿ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ವಸತಿ ಪ್ರದೇಶದ ನಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು ಎಂದು ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮೀಕಾಂತ ತಾಂಡೂರಕರ್ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೃಷ್ಣ ಭೋವಿ, ತಿಮ್ಮು ತಾಂಡೂರಕರ್, ಶಂಭು ಭೋವಿ, ಅಂಬು ಚವ್ಹಾಣ, ರಾಜು ಗುತ್ತೇದಾರ, ಸುನೀಲ್ ಪವಾರ, ದಿಲೀಪ್ ಕಟಗೆ, ಪರಶುರಾಮ ರಾಜಾಪುರ, ಚಿದಾನಂದ ಕಾಶಿ, ನಾಗು ಹೋಳಿಕಟ್ಟಿ, ಸೂರ್ಯಕಾಂತ, ರಾಜು ಭಜಂತ್ರಿ, ಸಂತೋಷ ಭಂಗಿ ಸೇರಿದಂತೆ ಹಲವರು ಇದ್ದರು.



