ಹರವಾಳ ಸೇತುವೆ-ಬಾಂಧಾರ್ ಯೋಜನೆ ಕಾಮಗಾರಿ ಪರಿಶೀಲಿಸಿದ ಸಚಿವ ಡಾ. ಅಜಯಸಿಂಗ್

ಜೇವರ್ಗಿ, ಅ. 8: ಮತಕ್ಷೇತ್ರದ ಹರವಾಳ ಗ್ರಾಮ ಸಮೀಪ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸೇತುವೆ–ಬಾಂಧಾರ್ ಯೋಜನೆಯ ಕಾಮಗಾರಿಯನ್ನು ರಾಜ್ಯ ಸಣ್ಣ ನೀರಾವರಿ ಸಚಿವ ಹಾಗೂ ಕ್ಷೇತ್ರದ ಶಾಸಕ ಡಾ. ಅಜಯಸಿಂಗ್ ಗುರುವಾರ ಪರಿಶೀಲಿಸಿದರು.
ಸುಮಾರು ₹130 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಮಹತ್ವದ ಯೋಜನೆಯು 368.60 ಮೀಟರ್ ಉದ್ದ ಹಾಗೂ 4 ಮೀಟರ್ ಎತ್ತರ ಹೊಂದಿದೆ. ಯೋಜನೆಯಿಂದ ನೀರು ಸಂಗ್ರಹಣೆ, ಕೃಷಿಗೆ ಅಗತ್ಯವಾದ ನೀರಿನ ಲಭ್ಯತೆ ಹೆಚ್ಚಿಸುವುದರ ಜೊತೆಗೆ ಹರವಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಂಪರ್ಕ ವ್ಯವಸ್ಥೆ ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ.
ಜೇವರ್ಗಿ ಹಾಗೂ ಅಫಜಲಪುರ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಸಂಪರ್ಕ ವ್ಯವಸ್ಥೆ, ನೀರಾವರಿ ಮತ್ತು ಮೂಲಸೌಕರ್ಯಕ್ಕೆ ಸಮಾನ ಆದ್ಯತೆ ನೀಡಲಾಗುತ್ತಿದೆ. ಜನರ ಅಗತ್ಯಗಳನ್ನು ಸ್ಥಳದಲ್ಲಿಯೇ ಆಲಿಸಿ, ದೀರ್ಘಕಾಲಿಕ ಹಾಗೂ ಶಾಶ್ವತ ಪರಿಹಾರಗಳನ್ನು ಒದಗಿಸುವ ಮೂಲಕ ಪ್ರತಿಯೊಂದು ಗ್ರಾಮಕ್ಕೂ ಅಭಿವೃದ್ಧಿಯ ಫಲ ತಲುಪಿಸುವುದು ಸರ್ಕಾರದ ಸಂಕಲ್ಪವಾಗಿದೆ ಎಂದು ಡಾ. ಅಜಯಸಿಂಗ್ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಸ್ಥಳೀಯ ಗ್ರಾಮಸ್ಥರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.



