LIVE

ಪ್ರತಿಭಾ ಪುರಸ್ಕಾರ-2026: ಶ್ರಮ, ಜ್ಞಾನ ಮತ್ತು ಮಾನವೀಯತೆಯಿಂದ ಯಶಸ್ಸು ಸಾಧ್ಯ

ಕಲಬುರಗಿ, ಆ.14: ನಗರದ ಓಜಾ ಲೇಔಟ್‌, ಜೇವರ್ಗಿ ರಸ್ತೆಯಲ್ಲಿರುವ ಶ್ರೀ ಗುರು ಇಂಡಿಪೆಂಡೆಂಟ್ ಪಿಯು ಕಾಲೇಜ್ ಆಫ್ ಸೈನ್ಸ್ ವತಿಯಿಂದ ಶುಕ್ರವಾರ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ‘ಪ್ರತಿಭಾ ಪುರಸ್ಕಾರ-2026’ ಸಮಾರಂಭವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು.

ಖ್ಯಾತ ಮೂಳೆ ಹಾಗೂ ಕೀಲು ತಜ್ಞರಾದ ಡಾ. ಅಜಯ್ ಕುರಾಳ ಹಾಗೂ ಡಾ. ಪಾರ್ವತಿ ಕುರಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತೋಶ್ರೀ ಕಲ್ಯಾಣಿ ನಾಯಕ್ ಹಾಗೂ ಶ್ರೀ ಎ.ವೈ. ನಾಯಕ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಗಣ್ಯರನ್ನು ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಶೈಕ್ಷಣಿಕ ಸಾಧನೆಯಲ್ಲಿ ಮೇಲುಗೈ ಸಾಧಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ವಿದ್ಯಾರ್ಥಿ ಶ್ರೀನಿವಾಸ ವಿಜಯಕುಮಾರ ತ್ರಿವೇದಿ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 591/600 ಅಂಕ ಗಳಿಸಿದ್ದು, ನೀಟ್‌ನಲ್ಲಿ 602 ಅಂಕ, ಕೆಸಿಇಟಿ ಎಂಜಿನಿಯರಿಂಗ್‌ನಲ್ಲಿ 1600ನೇ ರ್ಯಾಂಕ್‌, ಬಿಎನ್‌ವೈಎಸ್‌ನಲ್ಲಿ 234, ಬಿ.ಎಸ್‌ಸಿ ಕೃಷಿಯಲ್ಲಿ 305, ನರ್ಸಿಂಗ್‌ನಲ್ಲಿ 607 ಹಾಗೂ ಜೆಇಇ ಅಡ್ವಾನ್ಸ್‌ನಲ್ಲಿ 5711ನೇ ರ್ಯಾಂಕ್ ಪಡೆದ ಸಾಧನೆಗಾಗಿ ₹1 ಲಕ್ಷ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ನೀಟ್–2026ರಲ್ಲಿ ಕಾಲೇಜಿಗೆ ಅತಿ ಹೆಚ್ಚು ಅಂಕ ಪಡೆದ ಅಖಿಲ್ ಎ. ಅವರಿಗೆ ₹25 ಸಾವಿರ, ಜೆಇಇ ಅಡ್ವಾನ್ಸ್‌ನಲ್ಲಿ ಸಾಧನೆ ಮಾಡಿ ಐಐಟಿ ಮುಂಬೈ ಪ್ರವೇಶ ಪಡೆದ ವಿದ್ಯಾರ್ಥಿಗೆ ₹20 ಸಾವಿರ ಹಾಗೂ ಎನ್‌ಐಟಿ ಸುರತ್ಕಲ್ ಪ್ರವೇಶ ಪಡೆದ ವಿದ್ಯಾರ್ಥಿಗೆ ₹10 ಸಾವಿರ ನಗದು ಪುರಸ್ಕಾರ ನೀಡಲಾಯಿತು.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದ ಅರ್ಚನಾ ಚೌಧರಿ ಅವರಿಗೆ ₹20 ಸಾವಿರ ಹಾಗೂ ತೃತೀಯ ಸ್ಥಾನ ಪಡೆದ ಚೈತ್ರ ಎಸ್. ಅವರಿಗೆ ₹15 ಸಾವಿರ ನಗದು ಪುರಸ್ಕಾರ ನೀಡಲಾಯಿತು. ಪ್ರಥಮ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ಭಾಗ್ಯಶ್ರೀ ಎಂ. ಅವರಿಗೆ ₹20 ಸಾವಿರ, ದ್ವಿತೀಯ ಸ್ಥಾನ ಪಡೆದ ಶ್ರಾವ್ಯ ಹೂಗಾರ ಅವರಿಗೆ ₹15 ಸಾವಿರ ಹಾಗೂ ತೃತೀಯ ಸ್ಥಾನ ಪಡೆದ ಆರೋನ್ ಪಾಲ್ ಸೆಬಾಸ್ಟಿಯನ್ ಅವರಿಗೆ ₹11 ಸಾವಿರ ನಗದು ಪುರಸ್ಕಾರ ವಿತರಿಸಲಾಯಿತು. ವಿವಿಧ ವಿಷಯಗಳಲ್ಲಿ ಶೇ.100, 99 ಹಾಗೂ 98 ಅಂಕ ಪಡೆದ ವಿದ್ಯಾರ್ಥಿಗಳನ್ನೂ ಸನ್ಮಾನಿಸಲಾಯಿತು.

ಮುಖ್ಯ ಅತಿಥಿ ಡಾ. ಅಜಯ್ ಕುರಾಳ ಮಾತನಾಡಿ, ಉತ್ತಮ ಅಂಕಗಳು ಉನ್ನತ ಶಿಕ್ಷಣಕ್ಕೆ ದಾರಿ ತೋರಬಹುದು. ಆದರೆ ಜ್ಞಾನ, ಕೌಶಲ್ಯ, ಮಾನವೀಯತೆ ಹಾಗೂ ಉತ್ತಮ ಗುಣಗಳು ಜೀವನದಲ್ಲಿ ನಿಜವಾದ ಯಶಸ್ಸು ತಂದುಕೊಡುತ್ತವೆ. ನಿರಂತರ ಪರಿಶ್ರಮ ಮತ್ತು ಶಿಸ್ತು ಯಶಸ್ಸಿನ ಮೂಲಮಂತ್ರವಾಗಿದ್ದು, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಸಮಾಜದ ಒಳಿತಿಗಾಗಿ ಬಳಸಬೇಕು ಎಂದು ಸಲಹೆ ನೀಡಿದರು.

ಪ್ರಾಂಶುಪಾಲ ವಿದ್ಯಾಸಾಗರ ಎಂ. ಗೋಗಿ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾಳ್ಮೆ, ಪರಿಶ್ರಮ, ಸತ್ಯನಿಷ್ಠೆ ಹಾಗೂ ಗುರಿ ಸಾಧಿಸುವ ಛಲವೇ ಯಶಸ್ಸಿನ ಆಧಾರವಾಗಿದೆ ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ನಿತಿನ್ ಎ. ನಾಯಕ್ ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಸಂಸ್ಥೆ ಒದಗಿಸುತ್ತಿದೆ. ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಕರು ಮತ್ತು ಆಡಳಿತ ಮಂಡಳಿ ಬದ್ಧವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಂಸ್ಥೆಯ ಅಧ್ಯಕ್ಷೆ ನಳಿನಿ ಎ. ನಾಯಕ್, ಆಡಳಿತಾಧಿಕಾರಿ ನೇಹಾ ನಿತಿನ್ ನಾಯಕ್, ಆಡಳಿತ ಮಂಡಳಿ ಸದಸ್ಯ ಗುರುರಾಜ ಎ. ನಾಯಕ್, ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button