ಕಲಬುರಗಿ ಜಿಲ್ಲಾ ಪ್ರಥಮ ಕಾವ್ಯ ಮಹಿಳಾ ಸಮ್ಮೇಳನಕ್ಕೆ ಸಕಲ ಸಿದ್ಧತೆ

ಕಲಬುರಗಿ: ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಮಹಿಳಾ ನೌಕರರ ಸಂಘಗಳ ಆಶ್ರಯದಲ್ಲಿ ನಡೆಯಲಿರುವ ಕಲಬುರಗಿ ಜಿಲ್ಲಾ ಪ್ರಥಮ ಕಾವ್ಯ ಮಹಿಳಾ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಒಂದು ದಿನ ನಡೆಯಲಿರುವ ಸಮ್ಮೇಳನಕ್ಕೆ ಹಿರಿಯ ಲೇಖಕಿ ಶಕುಂತಲಾ ಪಾಟೀಲ ಜಾವಳಿ ಸರ್ವಾಧ್ಯಕ್ಷರಾಗಿದ್ದಾರೆ. ಕನ್ನಡ ಭವನದ ಸುವರ್ಣ ಸಭಾಂಗಣದಲ್ಲಿ ಮುಖ್ಯ ವೇದಿಕೆ ಸಿದ್ಧಪಡಿಸಲಾಗಿದ್ದು, ಕಸಾಪ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕಾವ್ಯ ಮಹಿಳಾ ಸಮ್ಮೇಳನ ಆಯೋಜಿಸಲಾಗುತ್ತಿದೆ.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ನೇತೃತ್ವದಲ್ಲಿ, ಲಿಂ. ನಿಂಬೆವ್ವ ಪಡಶೆಟ್ಟಿ ವೇದಿಕೆಯಡಿ ಸಮ್ಮೇಳನ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಕನ್ನಡ ಭವನದವರೆಗೆ ಸಮ್ಮೇಳನಾಧ್ಯಕ್ಷರ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಸಮ್ಮೇಳನದ ಹಿನ್ನೆಲೆಯಲ್ಲಿ ಕನ್ನಡ ಭವನವನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿರುವ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಜಯದೇವಿ ಜಂಗಮಶೆಟ್ಟಿ ಸಮ್ಮೇಳನ ಉದ್ಘಾಟಿಸಲಿದ್ದು, ಶ್ರೀ ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ. ಅಮರೇಶ್ವರಿ ಬಾಬುರಾವ ಚಿಂಚನಸೂರ ಅವರು ಶಕ್ತಿ ಸಿಂಚನ ಕೃತಿ ಬಿಡುಗಡೆಗೊಳಿಸಲಿದ್ದಾರೆ. ಸಮ್ಮೇಳನಾಧ್ಯಕ್ಷೆ ಶಕುಂತಲಾ ಪಾಟೀಲ ಜಾವಳಿ, ರೇಣುಕಾ ಡಾಂಗೆ, ನಂದಿನಿ ಸನಬಾಳ ಹಾಗೂ ಶಿವಲೀಲಾ ಕಲಗುರ್ಕಿ ಉಪಸ್ಥಿತರಿರುವರು.
ಮಹಿಳಾ ಸಾಧಕರಿಗೆ ಗೌರವ
ಮಹಿಳಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹಿರಿಯ ಪತ್ರಕರ್ತೆ ಶೀಲಾ ಪಿ. ತಿವಾರಿ, ಡಾ. ಗಂಗಾ ಪೂಜಾರ, ಡಾ. ನಿರ್ಮಲಾ ಸಿ. ಕೆಳಮನಿ, ಪದ್ಮಿನಿ ಕಿರಣಗಿ, ಡಾ. ಶರಣಮ್ಮ ಬಿ. ಪಾಟೀಲ, ರಾಜೇಶ್ವರಿ ಸಾಹು ಭವಾನಿ ಕಾಡ್ಲೂರ, ಮಾಲಾ ಕಮಲಾಪೂರ ಹಾಗೂ ಶಿಲ್ಪಾ ದಾಸ ಅವರಿಗೆ ವಾತ್ಸಲ್ಯ ಕಾವ್ಯ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು.
ಮಧ್ಯಾಹ್ನ 12.45ಕ್ಕೆ ನಡೆಯುವ ‘ಮರಳಿ ಅರಳುವ ಪರಿ’ ವಿಶೇಷ ಗೋಷ್ಠಿಯಲ್ಲಿ ‘ಮಹಿಳೆ ಮತ್ತು ಮೂಢನಂಬಿಕೆ’ ಕುರಿತು ಡಾ. ಶಿವಲೀಲಾ ಚಟ್ನಳ್ಳಿ, ‘ಸಮಾಜದ ಕಣ್ಣು ತೆರೆಸುವಲ್ಲಿ ಸ್ತ್ರೀವಾದಿ ಸಾಹಿತ್ಯದ ಪಾತ್ರ’ ಕುರಿತು ಡಾ. ಕಾವ್ಯಶ್ರೀ ಮಹಾಗಾಂವಕರ್ ಹಾಗೂ ‘ಸಮ್ಮೇಳನಾಧ್ಯಕ್ಷರ ಬದುಕು–ಬರಹ’ ಕುರಿತು ಡಾ. ಪ್ರಭಾವತಿ ಚಿತಕೋಟೆ ಮಾತನಾಡಲಿದ್ದಾರೆ. ಲೇಖಕಿ ರೂಪಾದೇವಿ ಬಂಗಾರ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ 2.30ಕ್ಕೆ ಲೇಖಕಿ ಡಾ. ಕರುಣಾ ಜಮದರಖಾನಿ ಅಧ್ಯಕ್ಷತೆಯಲ್ಲಿ ಶಕ್ತಿ ಕವಿಗೋಷ್ಠಿ ನಡೆಯಲಿದೆ. ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿ ಪ್ರಮೀಳಾ ಜಾನಪ್ಪಗೌಡ ಸಮಾರೋಪ ನುಡಿಗಳನ್ನಾಡಲಿದ್ದಾರೆ.
ಸಮ್ಮೇಳನದ ಮತ್ತೊಂದು ವಿಶೇಷವೆಂದರೆ ಇಡೀ ದಿನದ ಕಾರ್ಯಕ್ರಮವನ್ನು ಮಹಿಳೆಯರೇ ನಿರ್ವಹಿಸಲಿದ್ದಾರೆ. ಸಮ್ಮೇಳನದ ಯಶಸ್ಸಿಗಾಗಿ ಕಸಾಪದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಶಿವಲೀಲಾ ಕಲಗುರ್ಕಿ, ಮಹಾನಂದಾ ಹುಲಿ, ವಿಶಾಲಾಕ್ಷಿ ಮಾಯಣ್ಣವರ್, ಲಲಿತಾ ಪಾಟೀಲ, ಕವಿತಾ ಕಾವಳೆ, ಸುನೀತಾ ಮಾಳಗಿ, ಈರಣ್ಣ ಸೋನಾರ, ಮಹೇಶ ಚಿಂತನಪಳ್ಳಿ, ಚಂದ್ರಕಾಂತ ಸೂರನ್ ಸೇರಿದಂತೆ ಹಲವರು ವೇದಿಕೆ ಹಾಗೂ ಇತರ ಸಿದ್ಧತಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.



