ಜಿಲ್ಲಾಸುದ್ದಿಗಳು

ಮೂರು ಕಳ್ಳತನ ಪ್ರಕರಣ ಭೇದಿಸಿದ ಚಿತ್ತಾಪುರ ಪೊಲೀಸರು; ₹3.15 ಲಕ್ಷ ಮೌಲ್ಯದ ಸ್ವತ್ತು ಜಪ್ತಿ, ಇಬ್ಬರ ಬಂಧನ

ಚಿತ್ತಾಪುರ: ತಾಲೂಕಿನ ದಿಗ್ಗಾಂವ ಗ್ರಾಮ ಸೇರಿದಂತೆ ವಿವಿಧೆಡೆ ನಡೆದ ಮೂರು ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಚಿತ್ತಾಪುರ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ₹3.15 ಲಕ್ಷಕ್ಕೂ ಅಧಿಕ ಮೌಲ್ಯದ ಕಳುವಾದ ಸ್ವತ್ತು ಹಾಗೂ ಕಳ್ಳತನಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ದಿಗ್ಗಾಂವ ಗ್ರಾಮದ ಶಿವಬಸಮ್ಮ ಭೀಮರಾಯ ಕರದಳ್ಳಿ ಅವರ ಮನೆಯಲ್ಲಿ ಜೂನ್ 25ರಂದು ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಅವರ ದೂರಿನ ಮೇರೆಗೆ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 115/2026ರಡಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಕಲಂ 331(4) ಮತ್ತು 305(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಈ ಪ್ರಕರಣದ ತನಿಖೆಗಾಗಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ್ ಮೇಘಣ್ಣನವರ್, ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಹಾಗೂ ಸಿಪಿಐ ಎಸ್.ಬಿ. ಪಾಟೀಲ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಂಜುನಾಥ ರೆಡ್ಡಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.

ತನಿಖೆ ವೇಳೆ ಜುಲೈ 29ರಂದು ದಿಗ್ಗಾಂವ ಕ್ರಾಸ್ ಸಮೀಪ ನಾಗರಾಜ ಸಾಬಣ್ಣ ಭಜಂತ್ರಿ ಹಾಗೂ ಅಭಿಷೇಕ ಅಮೃತ ಮಡಿವಾಳ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಶಿವಬಸಮ್ಮ ಅವರ ಮನೆಯಿಂದ ಮೂರು ಮೊಬೈಲ್ ಫೋನ್‌ಗಳು (₹10 ಸಾವಿರ) ಹಾಗೂ 6 ಗ್ರಾಂ ತೂಕದ ಬಂಗಾರದ ಕರಳ್ಳಿ ಸರ (₹35 ಸಾವಿರ) ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ, ಇದೇ ಆರೋಪಿಗಳು ಈ ಹಿಂದೆ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗುನ್ನೆ ಸಂಖ್ಯೆ 16/2026ರ ತೊಗರಿ ಚೀಲ ಕಳ್ಳತನ ಪ್ರಕರಣ ಹಾಗೂ ಗುನ್ನೆ ಸಂಖ್ಯೆ 56/2026ರ ನೀರಿನ ಮೋಟಾರ್ ಪಂಪ್ ಮತ್ತು ಕಬ್ಬಿಣದ ಆಂಗಲ್ ಪೈಪ್ ಕಳವು ಪ್ರಕರಣಗಳಲ್ಲಿಯೂ ಭಾಗಿಯಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಆರೋಪಿಗಳಿಂದ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು ₹3,15,700 ಮೌಲ್ಯದ ಕಳುವಾದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ, ಕಳ್ಳತನಕ್ಕೆ ಬಳಸಿದ್ದ ಬಜಾಜ್ ಪಲ್ಸರ್ ಎನ್‌ಎಸ್ 200 ಮೋಟಾರ್‌ಸೈಕಲ್‌ನ್ನೂ ಜಪ್ತಿ ಮಾಡಲಾಗಿದೆ. ಬಳಿಕ ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಮೂರು ಕಳ್ಳತನ ಪ್ರಕರಣಗಳನ್ನು ಯಶಸ್ವಿಯಾಗಿ ಭೇದಿಸಿ ಆರೋಪಿಗಳನ್ನು ಬಂಧಿಸಿದ ಪಿಎಸ್‌ಐ ಮಂಜುನಾಥ ರೆಡ್ಡಿ ಹಾಗೂ ತನಿಖಾ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಶಂಸಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button