ಕಲಬುರಗಿಜಿಲ್ಲೆ ಸುದ್ದಿ

ತುಳಸೀದಾಸರ ಸಾಹಿತ್ಯದಲ್ಲಿ ಭಾರತೀಯ ಸಂಸ್ಕೃತಿಯ ಜೀವಂತ ದರ್ಶನ: ಡಾ. ಅನುರಾಧಾ ಕುಲಕರ್ಣಿ

ಕಲಬುರಗಿ: ಸಂತ ಗೋಸ್ವಾಮಿ ತುಳಸೀದಾಸರ ಸಾಹಿತ್ಯದಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ, ಭಕ್ತಿ, ಮಾನವೀಯ ಮೌಲ್ಯಗಳು ಹಾಗೂ ನೈತಿಕ ಆದರ್ಶಗಳ ಜೀವಂತ ಪ್ರತಿಬಿಂಬವಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ನಿಕಟಪೂರ್ವ ಉಪನ್ಯಾಸಕಿ ಡಾ. ಅನುರಾಧಾ ಕುಲಕರ್ಣಿ ಹೇಳಿದರು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗ ಹಾಗೂ ಅಖಿಲ ಭಾರತೀಯ ಹಿಂದಿ ಮಹಾಸಭೆ, ನವದೆಹಲಿಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಸಂತ ಗೋಸ್ವಾಮಿ ತುಳಸೀದಾಸರ 529ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತುಳಸೀದಾಸರು ತಮ್ಮ ಸಾಹಿತ್ಯದ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆ, ಭಕ್ತಿ, ಮಾನವೀಯ ಮೌಲ್ಯಗಳು ಹಾಗೂ ನೈತಿಕ ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸಿದ ಮಹಾನ್ ಸಂತ-ಕವಿಯಾಗಿದ್ದಾರೆ. ಅವರ ‘ರಾಮಚರಿತಮಾನಸ’ ಕೇವಲ ಧಾರ್ಮಿಕ ಗ್ರಂಥವಲ್ಲ; ಅದು ಭಾರತೀಯ ಜೀವನಮೌಲ್ಯಗಳು ಹಾಗೂ ಸಾಮಾಜಿಕ ಆದರ್ಶಗಳ ಪ್ರತಿಬಿಂಬವಾಗಿದೆ ಎಂದು ಡಾ. ಅನುರಾಧಾ ಕುಲಕರ್ಣಿ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಆರ್.ಬಿ. ಕೊಂಡಾ ಮಾತನಾಡಿ, ಸಂತ ತುಳಸೀದಾಸರ ಸಾಹಿತ್ಯವು ಭಾರತೀಯ ಸಮಾಜದ ಮೇಲೆ ಆಳವಾದ ಪ್ರಭಾವ ಬೀರಿದ್ದು, ಅವರ ಚಿಂತನೆಗಳು ಇಂದಿನ ಪೀಳಿಗೆಗೂ ಪ್ರೇರಣಾದಾಯಕವಾಗಿವೆ ಎಂದರು.

ಹಿಂದಿ ವಿಭಾಗದ ಮುಖ್ಯಸ್ಥ ಡಾ. ಪ್ರೇಮಚಂದ ಚವಾಣ್ ಸ್ವಾಗತ ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿ, ತುಳಸೀದಾಸರ ಜೀವನ, ವ್ಯಕ್ತಿತ್ವ ಮತ್ತು ಸಾಹಿತ್ಯಿಕ ಕೊಡುಗೆಯನ್ನು ಪರಿಚಯಿಸಿದರು. ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ತುಳಸೀದಾಸರ ಸ್ಥಾನ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಹಿಂದಿ ವಿಭಾಗದ ಉಪನ್ಯಾಸಕಿ ಕವಿತಾ ಠಾಕೂರ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸುಷ್ಮಾ ಕುಲಕರ್ಣಿ ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಹಿಂದಿ ವಿಭಾಗದ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button